ಪ್ರವೀಣ ಆಮ್ರೆ, ರಘುರಾಮ್ ಭಟ್ ಹಿತಾಸಕ್ತಿ ಸಂಘರ್ಷದ ಸುಳಿಯಲ್ಲಿ

ಶುಕ್ರವಾರ, 15 ಜುಲೈ 2016 (15:47 IST)
ಭಾರತದ ಮಾಜಿ ಟೆಸ್ಟ್ ಬ್ಯಾಟ್ಸ್‌ಮನ್ ಪ್ರವೀಣ್ ಆಮ್ರೆ ಮತ್ತು ಕರ್ನಾಟಕದ ಮಾಜಿ ಎಡಗೈ ಸ್ಪಿನ್ನರ್ ರಘುರಾಮ್ ಭಟ್ ಅವರು ಹಿತಾಸಕ್ತಿ ಸಂಘರ್ಷದ ಪ್ರಕರಣದಲ್ಲಿ ಸಿಲುಕಿರುವುದನ್ನು ಬಿಸಿಸಿಐ ಓಂಬುಡ್ಸ್‌ಮನ್ ಪತ್ತೆಹಚ್ಚಿದೆ. ಇದೇ ರೀತಿಯ ಆರೋಪಗಳಿಂದ ಭಾರತದ ಮಾಜಿ ನಾಯಕ ದಿಲೀಪ್ ವೆಂಗ್‌ಸರ್ಕಾರ್ ಅವರನ್ನು ಮುಕ್ತಗೊಳಿಸಿದೆ. ಮುಂಬೈ ಕ್ರಿಕೆಟ್ ಸಂಸ್ಥೆ ಮ್ಯಾನೇಜಿಂಗ್ ಸಮಿತಿ ಸದಸ್ಯರಾದ ಆಮ್ರೆ ಡೆಲ್ಲಿ ಡೇರ್‌ಡೆವಿಲ್ಸ್ ಐಪಿಎಲ್ ಟೀಂ ಕೋಚಿಂಗ್ ಸಿಬ್ಬಂದಿಯಾಗಿಯೂ ಸೇವೆ ಸಲ್ಲಿಸಿದ್ದರು.
 
ಆಮ್ರೆ ಆಡಳಿತ ಮಂಡಳಿ ಸದಸ್ಯರಾಗಿ ಐಪಿಎಲ್ ಫ್ರಾಂಚೈಸಿ ಕೋಚಿಂಗ್ ಸಿಬ್ಬಂದಿ ಸ್ಥಾನ ವಹಿಸಿಕೊಳ್ಳಬಾರದಿತ್ತು ಎಂದು ನ್ಯಾಯಮೂರ್ತಿ ಶಾಹ್ ಅಭಿಪ್ರಾಯಪಟ್ಟರು.  ವೆಂಗ್‌ಸರ್ಕಾರ್ ಪ್ರಸಕ್ತ ಮುಂಬೈ ಕ್ರಿಕೆಟ್ ಸಂಸ್ಥೆ ಉಪಾಧ್ಯಕ್ಷರಾಗಿದ್ದು ಪುಣೆಯಲ್ಲಿ ಕಿರಿಯ ಕ್ರಿಕೆಟಿಗರಿಗೆ ಕ್ರಿಕೆಟ್ ಅಕಾಡೆಮಿಯನ್ನು ನಡೆಸುತ್ತಿದ್ದರಿಂದ ಹಿತಾಸಕ್ತಿ ಸಂಘರ್ಷದ ಆರೋಪ ಕೇಳಿಬಂದಿತ್ತು.
 ವೆಂಗ್‌ಸರ್ಕಾರ್ ಉತ್ತರವನ್ನು ಗಮನಿಸಿದ ಓಂಬುಡ್ಸ್‌ಮೆನ್ ಬಿಸಿಸಿಐ ನಿಯಮಗಳ ಪ್ರಕಾರ ಹಿತಾಸಕ್ತಿ ಸಂಘರ್ಷವಿಲ್ಲ ಎಂದು ಸೂಚಿಸಿತು.
 
 ಮಾಜಿ ರಣಜಿ ಕ್ರಿಕೆಟರ್ ರಘುರಾಮ್ ಭಟ್ ವಿರುದ್ಧ ಹಿತಾಸಕ್ತಿ ಸಂಘರ್ಷದ ಆರೋಪವನ್ನು ಓಂಬುಡ್ಸ್‌ಮನ್ ಎತ್ತಿಹಿಡಿದಿದೆ. ಭಟ್ ಅವರು ಕೆಎಸ್‌ಸಿಎ ಮ್ಯಾನೇಜಿಂಗ್ ಕಮಿಟಿ ಸದಸ್ಯರಾಗಿದ್ದರಲ್ಲದೇ ಅಂಡರ್ 16 ಮತ್ತು ಅಂಡರ್ 14 ಸಂಸ್ಥೆಗೆ ಅಧ್ಯಕ್ಷ/ ಆಯ್ಕೆದಾರ ಹಾಗೂ ಬ್ರಿಜೇಶ್ ಪಟೇಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ