ವೃದ್ಧಿಮಾನ್ ಸಹಾ ಆರೋಪಗಳಿಗೆ ಸ್ಪಷ್ಟನೆ ನೀಡಿದ ರಾಹುಲ್ ದ್ರಾವಿಡ್
ಸೋಮವಾರ, 21 ಫೆಬ್ರವರಿ 2022 (09:30 IST)
ಕೋಲ್ಕೊತ್ತಾ: ಟೀಂ ಇಂಡಿಯಾದಲ್ಲಿ ಇನ್ನು ಸ್ಥಾನವಿಲ್ಲ ಎಂಬ ಕಾರಣಕ್ಕೆ ನಿವೃತ್ತಿಗೆ ಸೂಚಿಸಿದ್ದರು ಎಂಬ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಆರೋಪಗಳಿಗೆ ಕೋಚ್ ರಾಹುಲ್ ದ್ರಾವಿಡ್ ಸ್ಪಷ್ಟನೆ ನೀಡಿದ್ದಾರೆ.
ಮೊನ್ನೆಯಷ್ಟೇ ವೃದ್ಧಿಮಾನ್ ಸಹಾ, ತಮಗೆ ಇನ್ನು ಟೀಂ ಇಂಡಿಯಾದಲ್ಲಿ ಅವಕಾಶ ಸಿಗಲ್ಲ. ಹೀಗಾಗಿ ಪರ್ಯಾಯ ಮಾರ್ಗ ಹುಡುಕುವುದು ಉತ್ತಮ ಎಂದು ಪರೋಕ್ಷವಾಗಿ ನಿವೃತ್ತಿಗೆ ಪ್ರೇರೇಪಿಸಿದ್ದರು ಎಂದು ಆರೋಪಿಸಿದ್ದರು. ಅಲ್ಲದೆ, ಗಂಗೂಲಿ ಕೂಡಾ ಹಿಂದೊಮ್ಮೆ ಕೊಟ್ಟ ಭರವಸೆ ಮರೆತು ಈಗ ಕೈ ಬಿಟ್ಟಿದ್ದಾರೆ ಎಂದು ಬೇಸರ ಹೊರಹಾಕಿದ್ದರು.
ಅವರ ಈ ಆರೋಪಗಳ ಬೆನ್ನಲ್ಲೇ ನಿನ್ನೆ ವೆಸ್ಟ್ ಇಂಡೀಸ್ ವಿರುದ್ಧ ಮೂರನೇ ಟಿ20 ಪಂದ್ಯ ಮುಗಿದ ಬಳಿಕ ಕೋಚ್ ದ್ರಾವಿಡ್ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ವೃದ್ಧಿಮಾನ್ ಸಹಾ ಬಗ್ಗೆ ಅತ್ಯಂತ ಗೌರವವಿದೆ. ವೃದ್ಧಿಮಾನ್ ಆರೋಪಗಳಿಂದ ನನಗೆ ಖಂಡಿತಾ ಬೇಸರವಾಗಿಲ್ಲ. ಗೌರವಯುತವಾಗಿಯೇ ನಾನು ಅವರ ಜೊತೆ ಈ ಮಾತನಾಡಿದ್ದೆ. ಈ ವಿಚಾರವನ್ನು ಹೊರಗಿನವರಿಂದ ಅಥವಾ ಮಾಧ್ಯಮದವರಿಂದ ಅವರಿಗೆ ಗೊತ್ತಾಗುವುದಕ್ಕಿಂತ ನಾನೇ ನೇರವಾಗಿ ಹೇಳುವುದು ಉಚಿತವೆನಿಸಿತು. ಅದಕ್ಕೆ ಹೇಳಿದ್ದೆ.
ಇದು ಕೇವಲ ವೃದ್ಧಿಮಾನ್ ಸಹಾ ಜೊತೆಗೆ ಮಾತ್ರವಲ್ಲ. ನಾನು ತಂಡದ ಪ್ರತಿಯೊಬ್ಬರೊಂದಿಗೆ ನೇರವಾಗಿ, ಸ್ಪಷ್ಟವಾಗಿ ಹೇಳಬೇಕಾಗಿರುವುದನ್ನು ಹೇಳುತ್ತೇನೆ. ನಾನು ಹೇಳಿದ್ದಕ್ಕೆಲ್ಲಾ ಆಟಗಾರರು ಒಪ್ಪಬೇಕೆಂದು ನಾನು ಬಯಸುವುದಿಲ್ಲ. ಕೆಲವೊಂದು ಮಾತುಗಳು ಕೇಳಲು ಕಠೋರವೆನಿಸಬಹುದು. ಆದರೆ ಅದನ್ನು ಮುಚ್ಚಿಡಲು ಸಾಧ್ಯವಿಲ್ಲ. ನಾನು ಮಾತ್ರವಲ್ಲ, ಆಡುವ ಬಳಗ ಆಯ್ಕೆ ಮಾಡುವ ಮೊದಲು ನಾಯಕ ರೋಹಿತ್ ಶರ್ಮಾ ಕೂಡಾ ಆಟಗಾರರೊಂದಿಗೆ ಹೇಳಬೇಕಾದ ವಿಚಾರವನ್ನು ಸ್ಪಷ್ಟವಾಗಿ ಹೇಳುತ್ತಾರೆ. ನೀನು ಆಡುತ್ತಿಲ್ಲ ಎಂದು ಹೇಳುವುದು ತುಂಬಾ ಕಷ್ಟದ ಕೆಲಸ. ಕೆಲವು ಆಟಗಾರರಿಗೆ ಇದರಿಂದ ಬೇಸರವಾಗಬಹುದು. ಆದರೆ ಅದನ್ನು ನಾನು ಗೌರವಿಸುತ್ತೇನೆ. ಆದರೆ ಯಾವುದೇ ವಿಚಾರದಲ್ಲೂ ಸ್ಪಷ್ಟತೆ ಮತ್ತು ಪ್ರಾಮಾಣಿಕತೆ ಇರಬೇಕು ಎಂದು ಬಯಸುತ್ತೇನೆ ಎಂದು ದ್ರಾವಿಡ್ ಹೇಳಿದ್ದಾರೆ.