ರಾಹುಲ್, ಜಡೇಜ, ಆಕಾಶ್‌ ಕೆಚ್ಚೆದೆ ಹೋರಾಟ; ಫಾಲೋ ಆನ್ ಮುಖಭಂಗ ತಪ್ಪಿಸಿಕೊಂಡ ರೋಹಿತ್‌ ಪಡೆ

Sampriya

ಮಂಗಳವಾರ, 17 ಡಿಸೆಂಬರ್ 2024 (14:55 IST)
Photo Courtesy X
ಬ್ರಿಸ್ಬೇನ್: ಇಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಫಾಲೋಆನ್‌ ಮುಖಭಂಗ ತಪ್ಪಿಸಿಕೊಂಡಿದೆ. ಕೆ.ಎಲ್. ರಾಹುಲ್ ಮತ್ತು ರವೀಂದ್ರ ಜಡೇಜ ಅವರ ಅರ್ಧಶತಕಗಳ ನೆರವಿನಿಂದ ಭಾರತವು ಗೌರವದ ಮೊತ್ತ ಕಲೆಹಾಕಿದೆ.

ಕೆ.ಎಲ್. ರಾಹುಲ್ (84), ರವೀಂದ್ರ ಜಡೇಜ (77) ಮತ್ತು ಕೊನೆಯಲ್ಲಿ ಆಕಾಶ್ ದೀಪ್ (27*) ದಿಟ್ಟ ಹೋರಾಟದ ನೆರವಿನಿಂದ ಭಾರತ ತಂಡವು ಮೂರನೇ ಟೆಸ್ಟ್ ಪಂದ್ಯದಲ್ಲಿ ಫಾಲೋ ಆನ್ ತಪ್ಪಿಸುವಲ್ಲಿ ಯಶಸ್ವಿಯಾಗಿದೆ. ಪಂದ್ಯಕ್ಕೆ ಮಳೆ ಅಡ್ಡಿಯಾದರೂ ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 74.5 ಓವರ್‌ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿದೆ.

ಫಾಲೋ ಆನ್ ತಪ್ಪಿಸಿಕೊಳ್ಳಲು ಭಾರತಕ್ಕೆ 245 ರನ್‌ಗಳ ಅವಶ್ಯಕತೆಯಿತ್ತು. ಆದರೆ ಮುರಿಯದ 10ನೇ ವಿಕೆಟ್‌ಗೆ 39 ರನ್‌ಗಳ ಜೊತೆಯಾಟ ಕಟ್ಟಿದ ಆಕಾಶ್ ದೀಪ್ ಮತ್ತು ಜಸ್‌ಪ್ರೀತ್ ಬೂಮ್ರಾ, ಎದುರಾಳಿ ತಂಡ ಫಾಲೋ ಆನ್ ಹೇರುವುದನ್ನು ತಪ್ಪಿಸುವಲ್ಲಿ ಯಶಸ್ವಿಯಾದರು.

ಮಂದ ಬೆಳಕಿನಿಂದಾಗಿ ದಿನದಾಟ ಅಂತ್ಯಗೊಳಿಸಿದಾಗ ಆಕಾಶ್ ದೀಪ್ ಔಟಾಗದೇ 27 ಮತ್ತು ಜಸ್‌ಪ್ರೀತ್ ಬೂಮ್ರಾ ಔಟಾಗದೇ 10 ರನ್ ಗಳಿಸಿ ಕ್ರೀಸಿನಲ್ಲಿದ್ದಾರೆ.

ಪಂದ್ಯದಲ್ಲಿ ಇನ್ನೊಂದು ದಿನ ಮಾತ್ರ ಬಾಕಿ ಉಳಿದಿರುವಂತೆಯೇ ಭಾರತ ಈಗಲೂ 193 ರನ್‌ಗಳ ಹಿನ್ನೆಡೆಯಲ್ಲಿದೆ. ಅಲ್ಲದೆ ಕೊನೆಯ ದಿನದಾಟದಲ್ಲಿ ದ್ವಿತೀಯ ಇನಿಂಗ್ಸ್‌ನಲ್ಲಿ ಕನಿಷ್ಠ ಪಂದ್ಯ ಡ್ರಾಗೊಳಿಸಲು ಪ್ರಯತ್ನಿಸಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ