ಬ್ರಿಸ್ಬೇನ್: ಇಲ್ಲಿ ನಡೆಯುತ್ತಿರುವ ಮೂರು ಟೆಸ್ಟ್ ಪಂದ್ಯದ ವೇಳೆ ಮತ್ತೆ ಗಾಯದ ಸಮಸ್ಯೆಗೆ ತುತ್ತಾಗಿರುವ ಆಸ್ಟ್ರೇಲಿಯಾದ ಬಲಗೈ ವೇಗದ ಬೌಲರ್ ಜೋಶ್ ಹ್ಯಾಜಲ್‌ವುಡ್ ಅವರು ಭಾರತದ ವಿರುದ್ಧದ ಸರಣಿಯಿಂದಲೇ ಹೊರಬಿದ್ದಿದ್ದಾರೆ.
ನಾಲ್ಕನೇ ದಿನದಾಟದ ಪಂದ್ಯದ ಆರಂಭಕ್ಕೂ ಮುನ್ನ ಅಭ್ಯಾಸದ ವೇಳೆ ಹ್ಯಾಜಲ್‌ವುಡ್ ಬಲಗಾಲಿನ ಹಿಂಭಾಗದಲ್ಲಿ ನೋವು ಉಲ್ಬಣಗೊಂಡಿದೆ. ಈ ಕುರಿತು ಕ್ರಿಕೆಟ್ ಆಸ್ಟ್ರೇಲಿಯಾ ಮಾಹಿತಿ ನೀಡಿದೆ.
ಇದರಿಂದಾಗಿ ಪ್ರಸ್ತುತ ಸಾಗುತ್ತಿರುವ ಪಂದ್ಯದಲ್ಲೂ ಆಸ್ಟ್ರೇಲಿಯಾಕ್ಕೆ ಓರ್ವ ವೇಗದ ಬೌಲರ್‌ನ ಕೊರತೆ ಕಾಡುತ್ತಿದೆ.
ಗಾಯದ ಸಮಸ್ಯೆಯಿಂದಾಗಿ ಅಡಿಲೇಡ್‌ನಲ್ಲಿ ನಡೆದ ಹಗಲು-ರಾತ್ರಿ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಹ್ಯಾಜಲ್‌ವುಡ್ ಆಡಿರಲಿಲ್ಲ. ಮೂರನೇ ಪಂದ್ಯದ ವೇಳೆ ತಂಡಕ್ಕೆ ಪುನರಾಗಮನ ಮಾಡಿದ್ದರು.
ಈ ಪಂದ್ಯದಲ್ಲಿ ಆರು ಓವರ್ ಮಾತ್ರ ಎಸೆದಿದ್ದರೂ ವಿರಾಟ್ ಕೊಹ್ಲಿ ಅವರ ಮಹತ್ವದ ವಿಕೆಟ್ ಪಡೆಯುವಲ್ಲಿ ಹ್ಯಾಜಲ್‌ವುಡ್ ಯಶಸ್ವಿಯಾಗಿದ್ದರು. ಆದರೆ, ಗಾಯದಿಂದಾಗಿ ನಾಲ್ಕನೇ ದಿನದಾಟದಲ್ಲಿ ಬೌಲಿಂಗ್ ಮಾಡಲು ಮೈದಾನಕ್ಕಿಳಿಯಲಿಲ್ಲ.
ಹ್ಯಾಜಲ್‌ವುಡ್ ಸ್ಥಾನಕ್ಕೆ ಬದಲಿ ಆಟಗಾರನನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ. ನಾಲ್ಕನೇ ಟೆಸ್ಟ್‌ನಲ್ಲಿ ಸ್ಕಾಟ್ ಬೋಲ್ಯಾಂಡ್ ಆಸ್ಟ್ರೇಲಿಯಾ ತಂಡವನ್ನು ಸೇರಿಕೊಳ್ಳುವ ನಿರೀಕ್ಷೆಯಿದೆ.