ಪರ್ತ್: ಭಾರತದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಶತಕದ ಹೊರತಾಗಿಯೂ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 83 ರನ್ ಗಳಿಂದ ಪರಾಭವಗೊಂಡಿದೆ.
ಇದರೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆಸ್ಟ್ರೇಲಿಯಾ 3-0 ಅಂತರದ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಭಾರತದ ಪರ ಉಪನಾಯಕಿ ಸ್ಮೃತಿ ಮಂದಾನ ಶತಕ ಗಳಿಸಿದರೂ ಗೆಲುವು ದಾಖಲಿಸಲು ಸಾಧ್ಯವಾಗಲಿಲ್ಲ.
ಮೊದಲು ಬ್ಯಾಟಿಂಗ್ ನಡೆಸಿದ ಆಸ್ಟ್ರೇಲಿಯಾ ಅನ್ನಾಬೆಲ್ ಸದರ್ಲ್ಯಾಂಡ್ ಶತಕದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 298 ರನ್ಗಳ ಸವಾಲಿನ ಮೊತ್ತ ಪೇರಿಸಿತು. ಸದರ್ಲ್ಯಾಂಡ್ 95 ಎಸೆತಗಳಲ್ಲಿ 110 ರನ್ (9 ಬೌಂಡರಿ, 4 ಸಿಕ್ಸರ್) ಗಳಿಸಿದರು. ಭಾರತದ ಪರ ಆರುಂಧತಿ ರೆಡ್ಡಿ ನಾಲ್ಕು ವಿಕೆಟ್ ಗಳಿಸಿದರು.
ಈ ಗುರಿ ಬೆನ್ನಟ್ಟಿದ ಭಾರತ ಮಂದಾನ ಶತಕದ ಹೊರತಾಗಿಯೂ 45.1 ಓವರ್ಗಳಲ್ಲಿ 215 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು. ಏಕದಿನದಲ್ಲಿ ಒಂಬತ್ತನೇ ಶತಕ ಗಳಿಸಿದ ಮಂದಾನ, 109 ಎಸೆತಗಳಲ್ಲಿ 105 ರನ್ (14 ಬೌಂಡರಿ, 1 ಸಿಕ್ಸರ್) ಗಳಿಸಿ ಔಟ್ ಆದರು. ನಾಯಕಿ ಹರ್ಮನ್ಪ್ರೀತ್ ಕೌರ್ 12 ರನ್ ಗಳಿಸಿ ಔಟ್ ಆದರು.
ಆಸ್ಟ್ರೇಲಿಯಾದ ಪರ ಬೌಲಿಂಗ್ನಲ್ಲೂ ಮಿಂಚಿದ ಆಶ್ಲೀ ಗಾರ್ಡ್ನರ್ 30 ರನ್ ತೆತ್ತು ಐದು ವಿಕೆಟ್ ಗಳಿಸಿ ಮಿಂಚಿದರು.