ಮಳೆಯ ಕಾಟಕ್ಕೆ ಬೇಸತ್ತ ಭಾರತ-ಲಂಕಾ ಆಟಗಾರರು

ಶುಕ್ರವಾರ, 17 ನವೆಂಬರ್ 2017 (16:37 IST)
ಕೋಲ್ಕೊತ್ತಾ: ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಕ್ರಿಕೆಟ್ ಗಿಂತ ಹೆಚ್ಚು ಮಳೆಯದ್ದೇ ಆಟ ನಡೆಯುತ್ತಿರುವುದರಿಂದ ಆಟಗಾರರು ಹತಾಶೆಗೊಳಗಾಗಿದ್ದಾರೆ.
 

ನಿನ್ನೆ ಮಧ್ಯಾಹ್ನ ಆರಂಭವಾಗಿದ್ದ ಪಂದ್ಯ ಕೇವಲ 12 ಓವರ್ ಗಳಿಗೆ ದಿನದಾಟ ಮುಗಿದಿತ್ತು. ಇಂದು ಮತ್ತೆ ಮಳೆಯ ಭಯದಲ್ಲೇ ಪಂದ್ಯ ಆರಂಭವಾಗಿ ಹಾಗೂ ಹೀಗೂ 32 ಓವರ್ ಗಳ ಆಟವಾದ ಬಳಿಕ ಮತ್ತೆ ಮಳೆಯ ಕಾಟಕ್ಕೆ ಇಂದಿನ ದಿನದಾಟವನ್ನೂ ಸ್ಥಗಿತಗೊಳಿಸಲಾಯಿತು.

ಕೋಲ್ಕೊತ್ತಾದಲ್ಲಿ ಅಕಾಲಿಕವಾಗಿ ಮಳೆ ಸುರಿಯುತ್ತಿರುವುದರಿಂದ ಪಂದ್ಯ ಸಂಪೂರ್ಣ ಹಾಳಾಗಿದೆ. ಮೊದಲೇ ಹಸಿರು ಹೊದಿಕೆಯ ವೇಗಿಗಳಿಗೆ ನೆರವಾಗುವ ಪಿಚ್ ನಿರ್ಮಿಸಿದ್ದ ಕ್ಯುರೇಟರ್ ಗಳು ಮಳೆಯಿಂದಾಗಿ ಮತ್ತಷ್ಟು ತೇವಾಂಶ ಭರಿತ ಪಿಚ್ ನಿಂದ ಟೀಕೆ ಎದುರಿಸುವಂತಾಗಿದೆ. 

ಈ ಪಿಚ್ ಸಂಪೂರ್ಣವಾಗಿ ಬೌಲರ್ ಗಳ ಸ್ವರ್ಗವಾಗಿದೆ. ಎರಡನೇ ದಿನದ ಆಟದಲ್ಲಿ ಭಾರತ 74 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿದೆ. ಚೇತೇಶ್ವರ ಪೂಜಾರ ಮಾತ್ರ ಏಕಾಂಗಿ ಹೋರಾಟ ನಡೆಸುತ್ತಿದ್ದು 47 ರನ್ ಗಳಿಸಿದ್ದಾರೆ.

ಪದೇ ಪದೇ ಪಂದ್ಯ ಸ್ಥಗಿತವಾಗುವುದು, ತೇವಾಂಶ ಭರಿತ ಪಿಚ್ ನಲ್ಲಿ ಆಡಲು ಹೊಂದಿಕೊಳ್ಳುವುದು ಬ್ಯಾಟ್ಸ್ ಮನ್ ಗಳಿಗೆ ಕಷ್ಟವಾಗುತ್ತಿದೆ. ಅತ್ತ ಲಂಕನ್ನರೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂದು, ಪರಿಸ್ಥಿತಿಯ ಸಂಪೂರ್ಣ ಲಾಭ ಪಡೆಯಲು ಅವಕಾಶವಿಲ್ಲದೇ ಪರದಾಡುತ್ತಿದ್ದಾರೆ. ನಾಳೆಯಾದರೂ ಪರಿಸ್ಥಿತಿ ಸುಧಾರಿಸಬಹುದು ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ