ಲಂಕಾ ಹಿಡಿತದಿಂದ ಟೀಂ ಇಂಡಿಯಾವನ್ನು ‘ಪೂಜಾರ’ ನೇ ಕಾಪಾಡಬೇಕು!

ಶುಕ್ರವಾರ, 17 ನವೆಂಬರ್ 2017 (11:33 IST)
ಕೋಲ್ಕೊತ್ತಾ: ಶ್ರೀಲಂಕಾ ವಿರುದ್ಧ ಟೆಸ್ಟ್ ಪಂದ್ಯವೆಂದರೆ ಅದರಲ್ಲಿ ಟೀಂ ಇಂಡಿಯಾದ್ದೇ ಮೇಲುಗೈ ಎಂದು ಎಲ್ಲರೂ ಅಂದುಕೊಳ್ಳುತ್ತಿರಬೇಕಾದರೆ ಲಂಕಾ ಬೌಲರ್ ಗಳು ಶಾಕ್ ನೀಡಿದ್ದಾರೆ.
 

ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ದ್ವಿತೀಯ ದಿನ ಭೋಜನ ವಿರಾಮದ ವೇಳೆಗೆ 5 ವಿಕೆಟ್ ಉದುರಿಸಿಕೊಂಡು 74 ರನ್ ಗಳಿಸಿ ಸಂಕಷ್ಟದಲ್ಲಿದೆ.

ಮೊದಲ ಬಾಲ್ ನಲ್ಲಿಯೇ ನಿರೀಕ್ಷಿಸಲಾಗದ ಆಘಾತವಿಕ್ಕಿದ ಲಂಕಾ ಬೌಲರ್ ಗಳು ದ್ವಿತೀಯ ದಿನವೂ ಅದನ್ನೇ ಮುಂದುವರಿಸಿದ್ದು, ಟೀಂ ಇಂಡಿಯಾಕ್ಕೆ ಚೇತರಿಸಿಕೊಳ್ಳಲು ಅವಕಾಶವನ್ನೇ ನೀಡಿಲ್ಲ. ನಿನ್ನೆ 17 ರನ್ ಗೆ 3 ವಿಕೆಟ್ ಕಳೆದುಕೊಂಡು ದಿನದಾಟ ಮುಗಿಸಿದ್ದ ಭಾರತ ಇಂದು 57 ರನ್ ಸೇರಿಸಿಕೊಂಡು ಮತ್ತೆ ಎರಡು ವಿಕೆಟ್ ಉರುಳಿಸಿಕೊಂಡಿದೆ.

ನಿನ್ನೆ ಅಜೇಯವಾಗುಳಿದಿದ್ದ ಅಜಿಂಕ್ಯಾ ರೆಹಾನೆ 4 ರನ್ ಮತ್ತು ಆಲ್ ರೌಂಡರ್ ರವಿಚಂದ್ರನ್ ಅಶ್ವಿನ್ 4 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದ್ದಾರೆ. ಇವೆರಡೂ ವಿಕೆಟ್ ಗಳು ಶಣಕಾ ಪಾಲಾಗಿದೆ. ಭಾರತಕ್ಕೆ ಇರುವ ಏಕೈಕ ಆಶಾಕಿರಣ ಚೇತೇಶ್ವರ ಪೂಜಾರ.

ನಿನ್ನೆ ಅಜೇಯವಾಗಿದ್ದ ಪೂಜಾರ ಇಂದೂ ಕೂಡಾ ಎಚ್ಚರಿಕೆಯಿಂದ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ತಾವೊಬ್ಬ ಮತ್ತೊಬ್ಬ ದ್ರಾವಿಡ್ ಎನ್ನುವುದನ್ನು ನಿರೂಪಿಸಿದ್ದಾರೆ. ತಾಳ್ಮೆಯೇ ಮೂರ್ತಿವೆತ್ತಂತೆ ಆಡುತ್ತಿರುವ ಪೂಜಾರ 47 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಭಾರತ 100 ರನ್ ಒಳಗೆ ಆಲೌಟ್ ಆಗುವ ಅವಮಾನ ತಪ್ಪಿಸಬೇಕಾದರೆ ಪೂಜಾರ ಕ್ರೀಸ್ ನಲ್ಲಿರುವುದು ಅಗತ್ಯವಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ