ಮುಂಬೈ: ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗಿಯಾಗಿದ್ದ ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ನಿವೃತ್ತಿ ಬಳಿಕ ಏನು ಮಾಡುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಇತ್ತೀಚೆಗಷ್ಟೇ ಅಶ್ವಿನ್ ಆಸ್ಟ್ರೇಲಿಯಾ ಸರಣಿ ನಡುವೆ ಅಂತಾರಾಷ್ಟ್ರೀಯ ವೃತ್ತಿ ಬದುಕಿಗೆ ಗುಡ್ ಬೈ ಹೇಳಿದ್ದರು. ನಿನ್ನೆ ಮುಂಬೈನಲ್ಲಿ ನಡೆದ ಬಿಸಿಸಿಐ ನಮನ್ ಅವಾರ್ಡ್ ಕಾರ್ಯಕ್ರಮದಲ್ಲಿ ಅಶ್ವಿನ್ ಗೆ ಸನ್ಮಾನಿಸಲಾಯಿತು. ಈ ವೇಳೆ ಅವರಿಗೆ ನಿವೃತ್ತಿ ನಂತರದ ಜೀವನದ ಬಗ್ಗೆ ಪ್ರಶ್ನಿಸಲಾಯಿತು.
ಮೊದಲು ತಮಾಷೆಯಾಗಿ ‘ಅವರು ನನ್ನನ್ನು ಹೊರಹಾಕಿದರು’ ಎಂದ ಅಶ್ವಿನ್ ಬಳಿಕ ತಮ್ಮ ನಿವೃತ್ತ ಜೀವನದ ಬಗ್ಗೆ ಮಾತನಾಡಿದ್ದಾರೆ. ‘ಇಷ್ಟು ವರ್ಷ ನಾನು ಮನೆಯ ಕಡೆಗೆ ಗಮನಹರಿಸಿರಲಿಲ್ಲ. ಆದರೆ ಈಗ ನಿವೃತ್ತಿ ಬಳಿಕ ನನ್ನ ಮಕ್ಕಳನ್ನು ಶಾಲೆಗೆ ಡ್ರಾಪ್ ಮಾಡುವುದು ಅವರ ಜೊತೆಗಿರುವುದು ಒಂಥರಾ ಖುಷಿ ಕೊಡುತ್ತಿದೆ. ಮಕ್ಕಳನ್ನು ಕರೆದುಕೊಂಡು ಬರುವುದು, ಬಿಡುವುದು ಎಲ್ಲವನ್ನೂ ಮಾಡುತ್ತಿದ್ದೇನೆ’ ಎಂದಿದ್ದಾರೆ.
ನಮನ್ ಅವಾರ್ಡ್ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಸೇರಿದಂತೆ ಬಹುತೇಕ ಆಟಗಾರರು, ಮಹಿಳಾ ಕ್ರಿಕೆಟ್ ತಂಡದ ಆಟಗಾರರೂ ಇದ್ದರು. ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಗೆ ಜೀವಮಾನ ಶ್ರೇಷ್ಠ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಣಜಿ ಪಂದ್ಯದಲ್ಲಿ ಭಾಗಿಯಾಗಿರುವ ಕಾರಣ ವಿರಾಟ್ ಕೊಹ್ಲಿ ಗೈರಾಗಿದ್ದರು.