ಮುಂಬೈ: ಟೀಂ ಇಂಡಿಯಾ ಟಿ20 ವಿಶ್ವಕಪ್ ಗೆದ್ದ ಬಳಿಕ ಆಡಿದ ಯಾವುದೇ ಸರಣಿಯ ಬಗ್ಗೆಯೂ ಪ್ರೇಕ್ಷಕರು ಆಸಕ್ತಿ ವಹಿಸುತ್ತಿರುವಂತೆ ಕಂಡುಬಂದಿಲ್ಲ. ಹೀಗಾಗಿ ಗೌತಮ್ ಗಂಭೀರ್ ಕೋಚ್ ಆದ ಮೇಲೆ ಟೀಂ ಇಂಡಿಯಾ ಜನಪ್ರಿಯತೆ ಕಳೆದುಕೊಂಡಿದೆಯಾ ಎಂಬ ಅನುಮಾನ ಮೂಡಿದೆ.
ಭಾರತದಂತಹ ರಾಷ್ಟ್ರದಲ್ಲಿ ಕ್ರಿಕೆಟ್ ನ್ನು ಒಂದು ಧರ್ಮದಂತೆ ಪ್ರೀತಿಸುತ್ತಾರೆ. ಇದು ಕಳೆದ ಟಿ20 ವಿಶ್ವಕಪ್ ಗೆಲುವಿನವರೆಗೂ ಇತ್ತು. ಆದರೆ ಟಿ20 ವಿಶ್ವಕಪ್ ಬಳಿಕ ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ನಿವೃತ್ತಿಯಾದರು. ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡು ಮೂಲೆಗುಂಪಾದರು.
ಈಗ ತಂಡದಲ್ಲಿ ಹೊಸ ಆಟಗಾರರು ಮತ್ತು ಕೋಚ್ ಗೌತಮ್ ಗಂಭೀರ್ ರದ್ದೇ ಕಾರುಬಾರು. ಆದರೆ ಅದಕ್ಕೆ ತಕ್ಕಂತೆ ಗೆಲುವು ಮಾತ್ರ ದಕ್ಕುತ್ತಿಲ್ಲ. ಹೀಗಾಗಿ ಇತ್ತೀಚೆಗಿನ ದಿನಗಳಲ್ಲಿ ಜನರು ಕ್ರಿಕೆಟ್ ಕಡೆಗೆ ಆಸಕ್ತಿಯೇ ಕಳೆದುಕೊಳ್ಳುತ್ತಿದ್ದಾರೆ ಎನ್ನಬಹುದು.
ಪದೇ ಪದೇ ಸೋಲು ಅದರಲ್ಲೂ ಹೀನಾಯವಾಗಿ ಸೋಲುತ್ತಿರುವುದರಿಂದ ಮುಂಬರುವ ಚಾಂಪಿಯನ್ಸ್ ಟ್ರೋಫಿಯ ಮೇಲೂ ಭಾರತೀಯ ಅಭಿಮಾನಿಗಳಿಗೆ ನಿರೀಕ್ಷೆಯೇ ಇಲ್ಲವಾಗಿದೆ. ಇದೂ ಸಾಲದೆಂಬಂತೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ತಾರಾ ಆಟಗಾರರಾಗಿದ್ದರೂ ತಮ್ಮ ಘನತೆಗೆ ತಕ್ಕ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಸ್ಟಾರ್ ಮೆರುಗು ಕಳೆದುಕೊಂಡಿರುವ ಟೀಂ ಇಂಡಿಯಾ ಪಂದ್ಯಗಳು ಇತ್ತೀಚೆಗೆ ಅಭಿಮಾನಿಗಳಿಗೂ ಸಪ್ಪೆ ಎನಿಸುತ್ತಿದೆ.