ತವರಿನ ಪ್ರೇಕ್ಷಕರಿಗೆ ಭರ್ಜರಿ ಉಡುಗೊರೆ ನೀಡಿದ ರವೀಂದ್ರ ಜಡೇಜಾ
ಶುಕ್ರವಾರ, 5 ಅಕ್ಟೋಬರ್ 2018 (17:15 IST)
ರಾಜ್ ಕೋಟ್: ತವರಿನ ಪ್ರೇಕ್ಷಕರ ಎದುರು ಮಿಂಚುವುದು ಯಾವುದೇ ಕ್ರಿಕೆಟಿಗನಿಗೆ ಖುಷಿಯ ಸಂಗತಿಯೇ. ಅದನ್ನು ಇಂದು ರವೀಂದ್ರ ಜಡೇಜಾ ಮಾಡಿ ತೋರಿಸಿದ್ದಾರೆ.
ರಾಜ್ ಕೋಟ್ ನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನಿಂಗ್ಸ್ ನಲ್ಲಿ ದಾಖಲೆಯ 649 ರನ್ ಮಾಡಿ ಡಿಕ್ಲೇರ್ ಮಾಡಿಕೊಂಡಿದೆ. ಇದಕ್ಕೆ ಉತ್ತರವಾಗಿ ವಿಂಡೀಸ್ ದಿನದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ94 ರನ್ ಗಳಿಸಿದೆ.
ಎಲ್ಲಕ್ಕಿಂತ ಹೆಚ್ಚು ಈ ದಿನದ ಹೈಲೈಟ್ ಆಗಿದ್ದು ತವರಿನ ಹುಡುಗ ರವೀಂದ್ರ ಜಡೇಜಾ ಶತಕ. 50 ಕ್ಕೂ ಹೆಚ್ಚು ಟೆಸ್ಟ್ ಆಡಿರುವ ಜಡೇಜಾ ತಮ್ಮ ಚೊಚ್ಚಲ ಶತಕವನ್ನು ತವರಿನಲ್ಲೇ ಬಾರಿಸಿದ್ದು ವಿಶೇಷವಾಗಿತ್ತು. ಶತಕ ಗಳಿಸಿದ ಸಂಭ್ರಮದಲ್ಲಿ ಎಂದಿನಂತೆ ಬ್ಯಾಟ್ ಬೀಸಿ ಸಂಭ್ರಮಿಸಿದರು. ಅವರ ಶತಕ ಪೂರ್ತಿಯಾಗುತ್ತಿದ್ದಂತೆ ನಾಯಕ ವಿರಾಟ್ ಕೊಹ್ಲಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು. ನಾಟೌಟ್ ಆಗಿ ಭರ್ತಿ 100 ರನ್ ಗಳಿಸಿದ ಜಡೇಜಾ ಪೆವಿಲಿಯನ್ ಗೆ ಮರಳುತ್ತಿದ್ದರೆ ಪ್ರೇಕ್ಷಕರು ಎದ್ದು ನಿಂತು ಗೌರವ ಸಲ್ಲಿಸಿದರು. ಬದಲಾಗಿ ಜಡೇಜಾ ಕೂಡಾ ಬ್ಯಾಟ್ ಎತ್ತಿ ಧನ್ಯವಾದ ಸಲ್ಲಿಸುತ್ತಲೇ ನಡೆದರು. ಅತ್ತ ಡ್ರೆಸ್ಸಿಂಗ್ ರೂಂನಲ್ಲಿ ಜಡೇಜಾ ಶತಕ ಎಲ್ಲರ ಮೊಗದಲ್ಲಿ ದೊಡ್ಡ ನಗುವೇ ತಂದಿತ್ತು.
ಇದಾದ ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್ ಆರಂಭದಲ್ಲೇ ಎಡವಿತು. ಮೊಹಮ್ಮದ್ ಶಮಿ ಆರಂಭದಲ್ಲಿಯೇ ಎರಡು ವಿಕೆಟ್ ಕಿತ್ತರೆ ರವಿಚಂದ್ರನ್ ಅಶ್ವಿನ್ ಮತ್ತು ಜಡೇಜಾ ಕುಲದೀಪ್ ಯಾದವ್ ತಲಾ 1 ವಿಕೆಟ್ ಪಡೆದರು. ಭಾರತದ ಮೊದಲ ಇನಿಂಗ್ಸ್ ಮೊತ್ತ ದಾಟಲು ವಿಂಡೀಸ್ ಇನ್ನೂ 555 ರನ್ ಗಳಿಸಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.