ರಿಯೊ ಒಲಿಂಪಿಕ್ಸ್: ರಷ್ಯಾ ಸ್ಥಿತಿ ಡೋಲಾಯಮಾನ, ನಿಷೇಧಕ್ಕೆ ಐಒಸಿ ಪರಿಶೀಲನೆ

ಮಂಗಳವಾರ, 19 ಜುಲೈ 2016 (16:26 IST)
2014ರ ಸೋಚಿ ಚಳಿಗಾಲದ ಕ್ರೀಡಾಕೂಟ ಮತ್ತಿತರ ಕ್ರೀಡಾಕೂಟಗಳಲ್ಲಿ ಸರ್ಕಾರಿ ಪ್ರಾಯೋಜಿತ ಉದ್ದೀಪನ ಮದ್ದು ಸೇವನೆ ವ್ಯಾಪಕವಾಗಿ ನಡೆದಿರುವುದು ತನಿಖೆಯಲ್ಲಿ ಕಂಡುಬಂದಿರುವ ಹಿನ್ನೆಲೆಯಲ್ಲಿ 2016ರ ರಿಯೊ ಒಲಿಂಪಿಕ್ಸ್‌ಗೆ ರಷ್ಯಾದ ಸ್ಥಾನಮಾನ ಕುರಿತು ನಿರ್ಧರಿಸಲು ಐಒಸಿ ಸದಸ್ಯರು ತುರ್ತು ಸಭೆಯನ್ನು ಕರೆದಿದ್ದಾರೆ. ವಿಶ್ವ ಡೋಪಿಂಗ್ ವಿರೋಧಿ ಸಂಸ್ಥೆಯು(ವಾಡಾ) ರಷ್ಯಾದ ಸ್ಪರ್ಧಿಗಳನ್ನು ಮತ್ತು ಅಧಿಕಾರಿಗಳನ್ನು ಮುಂದಿನ ತಿಂಗಳ ರಿಯೊ ಕ್ರೀಡಾಕೂಟದಿಂದ ನಿಷೇಧಿಸಬೇಕೆಂದು ಕರೆ ನೀಡಿದೆ.
 
 ಕೆನಡಾದ ಕಾನೂನು ಪ್ರಾಧ್ಯಾಪಕ ಮೆಕ್‌ಲಾರೆನ್ ನಡೆಸಿದ ತನಿಖೆಯಲ್ಲಿ ಮಾಸ್ಕೊ ಕ್ರೀಡಾ ಸಚಿವಾಲಯ ಐದು ವರ್ಷಗಳ ಕಾಲ 30 ಕ್ರೀಡೆಗಳಲ್ಲಿ ಜಾರಿಗೆ ತಂದ ಸರ್ಕಾರಿ ನಿರ್ದೇಶಿತ ಫೇಲ್ ಸೇಫ್ ವ್ಯವಸ್ಥೆಗೆ  ರಷ್ಯಾದ ಗುಪ್ತಚರ ಸೇವೆಯು ನೆರವಾಗಿರುವುದು ಪತ್ತೆಯಾಗಿದೆ.
 
 ಐಒಸಿ ಮತ್ತು ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಯು ರಿಯೊ 2016ಕ್ಕೆ ರಷ್ಯಾ ಒಲಿಂಪಿಕ್ ಸಮಿತಿ ಮಂಡಿಸಿದ ಎಲ್ಲಾ ಅಥ್ಲೀಟ್‌ಗಳಿಗೆ ಪ್ರವೇಶ ನಿರಾಕರಿಸಬೇಕು ಎಂದು  ವಾಡಾದ ಎಕ್ಸಿಕ್ಯೂಟಿವ್ ಸಮಿತಿಯು ಸೂಚಿಸಿದೆ. ಈ ಹಗರಣದಲ್ಲಿ ಭಾಗಿಯಾದ ರಷ್ಯಾದ ಅಧಿಕಾರಿಗಳನ್ನು ವಜಾ ಮಾಡಬೇಕು ಮತ್ತು ರಷ್ಯಾದ ಸರ್ಕಾರಿ ಅಧಿಕಾರಿಗಳಿಗೆ ರಿಯೊ 2016 ಸೇರಿದಂತೆ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಪ್ರವೇಶ ನಿರಾಕರಿಸಬೇಕು ಎಂದು ವಾಡಾ ಕರೆ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ