ನವದೆಹಲಿ: ರಸ್ತೆ ಅಪಘಾತದಿಂದಾಗಿ ಇಷ್ಟು ದಿನ ಕ್ರಿಕೆಟ್ ನಿಂದ ದೂರವಿದ್ದ ರಿಷಬ್ ಪಂತ್ ಇದೀಗ ಕಮ್ ಬ್ಯಾಕ್ ಮಾಡಲು ಸಿದ್ಧರಾಗಿದ್ದಾರೆ.
2022 ರ ಡಿಸೆಂಬರ್ ನಲ್ಲಿ ರಿಷಬ್ ಕಾರು ಅಪಘಾತಕ್ಕೀಡಾಗಿ ಒಂದು ವರ್ಷದಿಂದ ಸಕ್ರಿಯ ಕ್ರಿಕೆಟ್ ನಿಂದ ದೂರವಿದ್ದಾರೆ. ಕಾಲಿಗೆ ಶಸ್ತ್ರಚಿಕಿತ್ಸೆಗೊಳಗಾದ ಬಳಿಕ ರಿಷಬ್ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡು ಇದೀಗಷ್ಟೇ ಚೇತರಿಸಿಕೊಂಡಿದ್ದಾರೆ. ಇದೀಗ ಫಿಟ್ನೆಸ್ ಮರಳಿ ಪಡೆಯುತ್ತಿರುವ ರಿಷಬ್ ಪಂತ್ ಕಮ್ ಬ್ಯಾಕ್ ಗೆ ಸಿದ್ಧತೆ ನಡೆಸುತ್ತಿದ್ದಾರೆ.
ಮುಂಬರುವ ಐಪಿಎಲ್ ನಲ್ಲಿ ರಿಷಬ್ ಪಂತ್ ಕಮ್ ಬ್ಯಾಕ್ ಮಾಡಲಿದ್ದಾರೆ ಎಂಬ ಸುದ್ದಿ ಬಂದಿದೆ. ಸದ್ಯಕ್ಕೆ ರಿಷಬ್ ಅಭ್ಯಾಸ ಆರಂಭಿಸಿದ್ದು ಐಪಿಎಲ್ ಮೂಲಕ ಸಕ್ರಿಯ ಕ್ರಿಕೆಟ್ ಗೆ ಮರಳಲಿದ್ದಾರೆ. ರಿಷಬ್ ಕಮ್ ಬ್ಯಾಕ್ ಗೆ ಕಾದು ನಿಂತಿರುವ ಅಭಿಮಾನಿಗಳಿಗೆ ಈ ಸುದ್ದಿ ಖುಷಿ ನೀಡಿದೆ.
ಎನ್ ಸಿಎನಲ್ಲಿ ಸತತವಾಗಿ ರಿಷಬ್ ಅಭ್ಯಾಸ ನಡೆಸುತ್ತಿದ್ದಾರೆ. ಐಪಿಎಲ್ 2024 ರ ವೇಳೆಗೆ ಅವರು ಫಿಟ್ನೆಸ್ ಸಾಬೀತುಪಡಿಸಲಿದ್ದಾರೆ ಎನ್ನಲಾಗಿದೆ. ರಿಷಬ್ ಐಪಿಎಲ್ ಗೆ ಲಭ್ಯರಾದರೆ ಅವರೇ ದೆಹಲಿ ತಂಡಕ್ಕೆ ನಾಯಕರಾಗಲಿದ್ದಾರೆ. ಕಳೆದ ಆವೃತ್ತಿಯಲ್ಲಿ ಅವರು ಆಡಿರಲಿಲ್ಲ. ಇದು ಡೆಲ್ಲಿ ಕ್ಯಾಪಿಟಲ್ಸ್ ಗೆ ದೊಡ್ಡ ಹೊಡೆತ ನೀಡಿತ್ತು. ಒಂದು ವೇಳೆ ಅವರು ಐಪಿಎಲ್ ನಲ್ಲಿ ಬ್ಯಾಟಿಂಗ್ ಮತ್ತು ಕೀಪಿಂಗ್ ಎರಡೂ ಜವಾಬ್ಧಾರಿ ನಿಭಾಯಿಸಲು ಯಶಸ್ವಿಯಾದರೆ ಮುಂಬರುವ ಟಿ20 ವಿಶ್ವಕಪ್ ವೇಳೆಗೆ ತಂಡಕ್ಕೆ ಕಮ್ ಬ್ಯಾಕ್ ಮಾಡಬಹುದು.
ರಿಷಬ್ ಪಂತ್ ರನ್ನು ಕಳೆದ ಒಂದು ವರ್ಷದಿಂದ ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಅವರಿಲ್ಲದೇ ಟೆಸ್ಟ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗನ ಕೊರತೆ ಅನುಭವಿಸುತ್ತಿದೆ. ಒಂದು ವೇಳೆ ರಿಷಬ್ ಫಿಟ್ನೆಸ್ ಪಡೆದು ತಂಡಕ್ಕೆ ಮರಳಿದರೆ ಭಾರತಕ್ಕೆ ದೊಡ್ಡ ತಲೆನೋವು ದೂರವಾದಂತಾಗಲಿದೆ.