ಡೀಪ್ ಫೇಕ್ ತಂತ್ರಜ್ಞಾನಕ್ಕೆ ಬಲಿಯಾದ ವಿರಾಟ್ ಕೊಹ್ಲಿ

Krishnaveni K

ಮಂಗಳವಾರ, 20 ಫೆಬ್ರವರಿ 2024 (13:34 IST)
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ  ವಿರಾಟ್ ಕೊಹ್ಲಿ ಕುರಿತಾದ ನಕಲಿ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಫ್ಯಾನ್ಸ್ ಹುಷಾರಾಗಿರುವುದು ಉತ್ತಮ.

ಇತ್ತೀಚೆಗಿನ ದಿನಗಳಲ್ಲಿ ಡೀಪ್ ಫೇಕ್ ನಕಲಿ ವಿಡಿಯೋ ತಂತ್ರಜ್ಞಾನಕ್ಕೆ ಎಷ್ಟೋ ಸೆಲೆಬ್ರಿಟಿಗಳು ಬಲಿಯಾಗುತ್ತಿದ್ದಾರೆ. ರಶ‍್ಮಿಕಾ ಮಂದಣ್ಣ ಮೊದಲ ವಿಕ್ಟಿಮ್ ಆಗಿದ್ದರು. ಅದಾದ ಬಳಿಕ ಪ್ರಧಾನಿ ಮೋದಿಯನ್ನೂ ಡೀಪ್ ಫೇಕ್ ಸಂಕಷ್ಟ ಬಿಟ್ಟಿರಲಿಲ್ಲ. ಇಂದು ಇನ್ನಷ್ಟು ಸೆಲೆಬ್ರಿಟಿಗಳ ನಕಲಿ ವಿಡಿಯೋ ಹರಿಯಬಿಡಲಾಗಿದೆ.

ಅವರಲ್ಲಿ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡಾ ಒಬ್ಬರು. ಬೆಟ್ಟಿಂಗ್ ಆಪ್ ಒಂದರ ಪ್ರಮೋಷನ್ ಮಾಡುತ್ತಿರುವಂತೆ ಕೊಹ್ಲಿಯ ನಕಲಿ ವಿಡಿಯೋವೊಂದು ಹರಿದಾಡುತ್ತಿದೆ. ಕೊಹ್ಲಿಗೆ ಸಾಕಷ್ಟು ಫ್ಯಾನ್ಸ್ ಫಾಲೋವರ್ಸ್ ಇದ್ದಾರೆ. ಹೀಗಾಗಿ ಅವರು ಇಂತಹ ಬೆಟ್ಟಿಂಗ್ ಆಪ್ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ ಎಂದರೆ ಅದನ್ನು ಕಣ್ಣು ಮುಚ್ಚಿ ನಂಬುವವರು ಇರುತ್ತಾರೆ. ಹೀಗಾಗಿ ಯಾರೋ ಬೇಕೆಂದೇ ಕಿಡಿಗೇಡಿಗಳು ಈ ರೀತಿ ನಕಲಿ ವಿಡಿಯೋ ಹರಿಯಬಿಟ್ಟಿದ್ದಾರೆ. ಕೊಹ್ಲಿ ವಿಡಿಯೋ ನೈಜವಾಗಿರಲಿ ಎಂಬ ಕಾರಣಕ್ಕೆ ಕಿಡಿಗೇಡಿಗಳು ಖ್ಯಾತ ಪತ್ರಕರ್ತರೊಬ್ಬರ ವಿಡಿಯೋವನ್ನೂ ಸೇರಿಸಿದ್ದಾರೆ. ಈ ನಕಲಿ ವಿಡಿಯೋದಲ್ಲಿ ಕೊಹ್ಲಿ ಕೇವಲ ಮೂರು ದಿನದಲ್ಲಿ 1 ಸಾವಿರ ರೂ. ಬಂಡವಾಳ ಹಾಕಿ 81 ಸಾವಿರ ರೂ. ಪಡೆದಿರುವುದಾಗಿ ಹೇಳುತ್ತಾರೆ. ಇದನ್ನು ನೋಡಿ ಎಷ್ಟೋ ಜನ ಮೋಸ ಹೋಗುವ ಅಪಾಯವೂ ಇದೆ.

ಕೇವಲ ಕೊಹ್ಲಿಯ ವಿಡಿಯೋ ಮಾತ್ರವಲ್ಲ, ಇಂದು ಬಾಲಿವುಡ್ ನಟರಾದ ಶಾರುಖ್ ಖಾನ್, ಅಕ್ಷಯ್ ಕುಮಾರ್, ರಣಬೀರ್ ಕಪೂರ್ ಅವರಂತಹ ಘಟಾನುಘಟಿ ಕಲಾವಿದರ ನಕಲಿ ವಿಡಿಯೋ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಡೀಪ್ ಫೇಕ್ ವಿಡಿಯೋ ಕಡಿವಾಣಕ್ಕೆ ಸರ್ಕಾರ, ಕಾನೂನು ಎಷ್ಟೇ ಪ್ರಯತ್ನ ಪಟ್ಟರೂ ಇಂತಹ ವಿಡಿಯೋಗಳು ಮತ್ತೆ ಮತ್ತೆ ಹುಟ್ಟಿಕೊಳ್ಳುತ್ತಿರುವುದು ವಿಪರ್ಯಾಸ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ