ಮುಂಬೈ: ಐಪಿಎಲ್ 2024 ರ ವೇಳಾಪಟ್ಟಿ ಪ್ರಕಟವಾಗಿದ್ದು ಮಾರ್ಚ್ 22 ರಿಂದ ಟೂರ್ನಮೆಂಟ್ ಶುರುವಾಗಲಿದೆ ಎಂದು ಬಿಸಿಸಿಐ ಪ್ರಕಟಿಸಿದೆ. ಮೇ 26 ರಂದು ಫೈನಲ್ ಪಂದ್ಯ ನಡೆಯಲಿದೆ.
ಐಪಿಎಲ್ ಮುಖ್ಯಸ್ಥ ಅರುಣ್ ಧುಮಾಲ್ ಮಾರ್ಚ್ 22 ರಿಂದ ಈ ಬಾರಿಯ ಟೂರ್ನಿ ಆರಂಭವಾಗುತ್ತಿರುವುದಾಗಿ ಖಚಿತಪಡಿಸಿದ್ದಾರೆ. ಆದರೆ ಐಪಿಎಲ್ 2024 ರ ಪೂರ್ತಿ ವೇಳಾಪಟ್ಟಿಯನ್ನು ಟೂರ್ನಿ ಆರಂಭವಾಗುವ 15 ದಿನ ಮೊದಲಷ್ಟೇ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.
ಏಪ್ರಿಲ್-ಮೇ ಅವಧಿಯಲ್ಲಿ ದೇಶದಲ್ಲಿ ಲೋಕಸಭೆ ಚುನಾವಣೆ ಕಾವೇರಲಿದೆ. ಹೀಗಾಗಿ ಚುನಾವಣೆಯಿಂದಾಗಿ ಐಪಿಎಲ್ 2024 ರ ವೇಳಾಪಟ್ಟಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಅಂತಿಮ ವೇಳಾಪಟ್ಟಿ ಪ್ರಕಟವಾಗಲಿದೆ.
ಮಾರ್ಚ್ 22 ರಿಂದ ಟೂರ್ನಮೆಂಟ್ ಆರಂಭಿಸಲು ಚಿಂತನೆ ನಡೆಸಿದ್ದೇವೆ. ಈ ಬಗ್ಗೆ ಸರ್ಕಾರೀ ಏಜೆನ್ಸಿಗಳ ಜೊತೆ ಮಾತುಕತೆ ನಡೆಸುತ್ತಿದ್ದೇವೆ. ಮೊದಲು ಆರಂಭಿಕ ಹಂತದ ವೇಳಾಪಟ್ಟಿ ಪ್ರಕಟವಾಗಲಿದೆ. ಬಳಿಕ ಪೂರ್ತಿ ವೇಳಾಪಟ್ಟಿ ಬಿಡುಗಡೆ ಮಾಡುತ್ತೇವೆ. ಇಡೀ ಟೂರ್ನಮೆಂಟ್ ಭಾರತದಲ್ಲೇ ನಡೆಯಲಿದೆ ಎಂದು ಅರುಣ್ ಧುಮಾಲ್ ಸ್ಪಷ್ಟಪಡಿಸಿದ್ದಾರೆ. ಈ ಬಾರಿ ಲೋಕಸಭೆ ಚುನಾವಣೆ ಇರುವುದರಿಂದ ಐಪಿಎಲ್ ಬೇರೆ ದೇಶಕ್ಕೆ ಶಿಫ್ಟ್ ಆಗಬಹುದು ಎಂಬ ಅನುಮಾನಗಳಿತ್ತು. ಆದರೆ ಅದಕ್ಕೆ ಈಗ ತೆರೆ ಬಿದ್ದಿದೆ. ಐಪಿಎಲ್ 2024 ರ ವೇಳಾಪಟ್ಟಿ ಬಗ್ಗೆ ಇದ್ದ ಗೊಂದಲಗಳೂ ದೂರವಾಗಿದೆ. ಇದಕ್ಕೆ ಮೊದಲು ಅಂದರೆ ಫೆಬ್ರವರಿ 23 ರಿಂದ ಮಹಿಳೆಯರ ಐಪಿಎಲ್ ನಡೆಯಲಿದೆ. ಇದಾದ ಬಳಿಕ ಪುರುಷರ ಐಪಿಎಲ್ ಗೆ ತಯಾರಿ ನಡೆಯಲಿದೆ. ಮಹಿಳೆಯರ ಡಬ್ಲ್ಯುಪಿಎಲ್ ಟೂರ್ನಿ ಎರಡನೇ ಸೀಸನ್ ಗೆ ಕಾಲಿಡುತ್ತಿದೆ.