ರೋಹಿತ್ ಶರ್ಮಾ ಮನಮೋಹಕ ಹೊಡೆತ ನೋಡುತ್ತಾ ನಿಂತುಬಿಟ್ಟ ಕೊಹ್ಲಿ, ಕೆಎಲ್ ರಾಹುಲ್!

ಶುಕ್ರವಾರ, 13 ಜುಲೈ 2018 (08:59 IST)
ಟ್ರೆಂಟ್ ಬ್ರಿಡ್ಜ್: ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 8 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. ಇದಕ್ಕೆ ಕಾರಣವಾಗಿದ್ದು ಕುಲದೀಪ್ ಯಾದವ್ ಅವರ ಅಮೋಘ ಬೌಲಿಂಗ್ ಮತ್ತು ರೋಹಿತ್ ಶರ್ಮಾ ಸಿಡಿಲಬ್ಬರದ ಬ್ಯಾಟಿಂಗ್.

ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 49.5 ಓವರ್ ಗಳಲ್ಲಿ 268 ರನ್ ಗಳಿಗೆ ಆಲೌಟ್ ಆಯಿತು. ಆರಂಭದಲ್ಲೇ ಭಾರತದ ಸ್ಪಿನ್ ಜೋಡಿ ಕುಲದೀಪ್ ಯಾದವ್ ಘಾತಕ ದಾಳಿ ಸಂಘಟಿಸಿದರು. ಕುಲದೀಪ್ ಯಾದವ್ ಜೀವನಶ್ರೇಷ್ಠ 6 ವಿಕೆಟ್ ಕಿತ್ತು ಪಂದ್ಯ ಶ್ರೇಷ್ಠರಾದರು. ಉಮೇಶ್ ಯಾದವ್ 2, ಯಜುವೇಂದ್ರ ಚಾಹಲ್ 1 ವಿಕೆಟ್ ಕಿತ್ತರು.

ನಂತರ ಬ್ಯಾಟಿಂಗ್ ಆರಂಭಿಸಿದ್ದ ಟೀಂ ಇಂಡಿಯಾಕ್ಕೆ ಬಿರುಸಿನ ಆರಂಭ ಸಿಕ್ಕಿತು. ಫಾರ್ಮ್ ಕಳೆದುಕೊಂಡಿದ್ದ ಧವನ್ ಬಿರುಸಿನಿಂದ ಬ್ಯಾಟಿಂಗ್ ಆರಂಭಿಸಿ ಸಿಡಿಯುವ ಲಕ್ಷಣ ತೋರಿದರಾದರೂ 27 ಎಸೆತಗಳಲ್ಲಿ 40 ರನ್ ಗಳಿಸಿ ಔಟಾದರು. ನಂತರ ಕೆಎಲ್ ರಾಹುಲ್ ಬ್ಯಾಟಿಂಗ್ ಗೆ ಇಳಿಯಬಹುದು ಎಂದು ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ ಸ್ವತಃ ನಾಯಕ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಇಳಿದು 82 ಎಸೆತಗಳಲ್ಲಿ 75 ರನ್ ಗಳಿಸಿ ಔಟಾದರು. ಕೆಎಲ್ ರಾಹುಲ್ 9 ರನ್ ಗಳಿಸಿ ನಾಟೌಟ್ ಆಗಿ ಉಳಿದರು.

ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಟಿ20 ಪಂದ್ಯದ ಫೈನಲ್ ಪಂದ್ಯದಲ್ಲಿ ಮಾಡಿದ್ದ ಮೋಡಿಯನ್ನೇ ರೋಹಿತ್ ಶರ್ಮಾ ಇಲ್ಲಿಯೂ ಮಾಡಿದರು. ಅವರು ಆರಂಭದಿಂದ ಎಚ್ಚರಿಕೆಯ ಆಟವಾಡಿ ನಂತರ ಸಿಡಿದರು. ಕೆಲವು ಮನಮೋಹಕ ಹೊಡೆತಗಳು ಮತ್ತೊಂದು ತುದಿಯಲ್ಲಿದ್ದ ವಿರಾಟ್ ಕೊಹ್ಲಿ ಮತ್ತು ನಂತರ ಬಂದ ಕೆಎಲ್ ರಾಹುಲ್ ರನ್ನು ಮಂತ್ರ ಮುಗ್ಧಗೊಳಿಸಿದವು. ರೋಹಿತ್ ಒಟ್ಟಾರೆ 114 ಎಸೆತಗಳಲ್ಲಿ 4 ಸಿಕ್ಸರ್, 15 ಬೌಂಡರಿಗಳೊಂದಿಗೆ 137 ರನ್ ಸಿಡಿಸಿದರು. ಅಂತಿಮವಾಗಿ ಟೀಂ ಇಂಡಿಯಾ 40.1 ಓವರ್ ಗಳಲ್ಲೇ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.             

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ