ಇಂದೋರ್: ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯ. ಸತತವಾಗಿ ಎರಡು ಸೋಲುಗಳಿಂದ ಕಂಗಾಲಾಗಿರುವ ಭಾರತ ತಂಡ ಈಗ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಇಂದೋರ್‌ನಲ್ಲಿ ಭಾನುವಾರ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮಹಿಳಾ ಏಕದಿನ ವಿಶ್ವಕಪ್‌ನ ಪಂದ್ಯ ಹರ್ಮನ್‌ಪ್ರೀತ್ ಕೌರ್ ಪಡೆಗೆ ನಿರ್ಣಾಯಕವಾಗಿದೆ. ಈ ಪಂದ್ಯವನ್ನು ಕೈಚೆಲ್ಲಿದ್ದೇ ಆದಲ್ಲಿ ಆತಿಥೇಯ ಭಾರತದ ಸೆಮಿಫೈನಲ್ ಹಾದಿ ಕಠಿಣವಾಗಲಿದೆ.
ಭಾರತ ತಂಡವು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತ್ತು. ಇದೀಗ ತಂಡವು ಗೆಲುವಿನ ಹಳಿಗೆ ಮರಳುವತ್ತ ಚಿತ್ತ ಹರಿಸಿದೆ. ಸೆಮಿಫೈನಲ್ ರೇಸ್‌ನಲ್ಲಿರಬೇಕಾದರೆ ಉಳಿದಿರುವ ಮೂರು ಪಂದ್ಯಗಳಲ್ಲಿ ಎರಡನ್ನು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ.
ಪರಿಣತ ಬೌಲರ್ ಇಲ್ಲದಿರುವುದು ಭಾರತ ತಂಡಕ್ಕೆ ದುಬಾರಿಯಾಗಿದೆ. ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ತಂಡಗಳು, 251 ಮತ್ತು 330 ರನ್‌ಗಳನ್ನು ಚೇಸ್ ಮಾಡಿರುವುದು ಆತಿಥೇಯರು ಬೌಲಿಂಗ್ ಸೀಮಿತ ಬೌಲಿಂಗ್ ಶಕ್ತಿಗೆ ಕನ್ನಡಿಯಾಗಿದೆ.
ಆಲ್‌ರೌಂಡರ್‌ಗಳ ಮೂಲಕ ಬ್ಯಾಟಿಂಗ್ ಆಳಕ್ಕೆ ಒತ್ತು ನೀಡಿರುವ ಕಾರಣ ಅಮನ್ಜೋತ್ ಅವರಿಗೆ ಮಣೆಹಾಕಿದ್ದು, ರೇಣುಕಾ ಸಿಂಗ್ ಬೆಂಚ್ ಕಾಯಬೇಕಿದೆ. ವೇಗದ ವಿಭಾಗದಲ್ಲಿ ಕ್ರಾಂತಿ ಗೌಡ್ ಮಾತ್ರ ಪರಿಣಾಮಕಾರಿ ಎನಿಸಿದ್ದಾರೆ.
ನಾಲ್ಕು ಬಾರಿಯ ಚಾಂಪಿಯನ್ ಇಂಗ್ಲೆಂಡ್ ಉತ್ತಮ ಸ್ಥಿತಿಯಲ್ಲಿದೆ. ಆಸ್ಟ್ರೇಲಿಯಾ ಬಿಟ್ಟರೆ, ಅಜೇಯವಾಗಿ ಉಳಿದ ಇನ್ನೊಂದು ತಂಡ ಇಂಗ್ಲೆಂಡ್. ವೈಯಕ್ತಿಕ ಆಟಗಳಿಂದ ಪಂದ್ಯ ಗೆಲ್ಲಿಸಬಲ್ಲ ಸಮರ್ಥ ಆಟಗಾರ್ತಿಯರು ತಂಡದಲ್ಲಿದ್ದಾರೆ.