ಮುಂಬೈ: ಸಿಯೆಟ್ ವರ್ಷದ ಕ್ರಿಕೆಟಿಗ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಆಡಿರುವ ಮಾತುಗಳು ಈಗ ವೈರಲ್ ಆಗಿದೆ. 5 ಐಪಿಎಲ್ ಟ್ರೋಫಿಗಳನ್ನು ಸುಮ್ಮನೇ ಗೆದ್ದಿಲ್ಲ, ವಿಶ್ವಕಪ್ ಗೆಲುವಿನ ರುಚಿಯನ್ನು ಒಮ್ಮೆ ಕಂಡಿದ್ದೇವೆ, ಇನ್ನು ಬಿಡಲ್ಲ ಎಂದು ಎದುರಾಳಿಗಳಿಗೆ ರೋಹಿತ್ ವಾರ್ನಿಂಗ್ ಕೊಟ್ಟಿದ್ದಾರೆ.
ಸಿಯೆಟ್ ವರ್ಷದ ಕ್ರಿಕೆಟಿಗ ಪ್ರಶಸ್ತಿ ಪಡೆದ ಬಳಿಕ ವೇದಿಕೆಯಲ್ಲಿ ಮಾತನಾಡಿದ ರೋಹಿತ್ ಶರ್ಮಾ ಸುದೀರ್ಘವಾಗಿ ಮಾತನಾಡಿದ್ದಾರೆ. ಐಪಿಎಲ್ ನಲ್ಲಿ ಮುಂಬೈ ನಾಯಕನಾಗಿ ತಾವು ಕಂಡ ಯಶಸ್ಸು ಮತ್ತು ಇತ್ತೀಚೆಗೆ ಟಿ20 ವಿಶ್ವಕಪ್ ಫೈನಲ್ ಗೆಲುವಿನ ಬಗ್ಗೆ ಮುಕ್ತವಾಗಿ ಮನದಾಳ ಹಂಚಿಕೊಂಡಿದ್ದಾರೆ.
ಈ ತಂಡವನ್ನು ಫಲಿತಾಂಶದ ಬಗ್ಗೆ ಚಿಂತಿಸದೇ ಆಟದ ಬಗ್ಗೆ ಗಮನ ಕೇಂದ್ರೀಕರಿಸುವಂತೆ ಮಾಡುವುದು ನನ್ನ ಕನಸಾಗಿತ್ತು. ನನ್ನ ಕನಸಿಗೆ ಬೆಂಬಲ ನೀಡಿದ ಮೂರು ಆಧಾರ ಸ್ತಂಬಗಳೆಂದರೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಕೋಚ್ ರಾಹುಲ್ ದ್ರಾವಿಡ್ ಮತ್ತು ಆಯ್ಕೆಗಾರ ಅಜಿತ್ ಅಗರ್ಕರ್. ನನ್ನ ತಂಡದಲ್ಲಿ ಒತ್ತಡವಿಲ್ಲದೇ ಆಟಗಾರರು ಮೈದಾನಕ್ಕೆ ಹೋಗಿ ಆಡುವಂತಹ ವಾತಾವರಣ ನಿರ್ಮಿಸಲು ಬಯಸಿದ್ದೆವು. ಖಂಡಿತವಾಗಿಯೀ ಈ ಗೆಲುವಿನಲ್ಲಿ ಇಷ್ಟು ಜನ ಮಾತ್ರವಲ್ಲ, ನನ್ನ ಆಟಗಾರರೂ ಕಾರಣ. ನನಗೆ ಬೇಕಾದ ಸಂದರ್ಭದಲ್ಲಿ ತಂಡಕ್ಕೆ ಆಧಾರವಾಗಿ ನಿಂತವರು ನನ್ನ ಆಟಗಾರರು. ಇದೆಲ್ಲದಕ್ಕೂ ಅವರೂ ಕಾರಣ ಎಂದಿದ್ದಾರೆ.
ಈಗಾಗಲೇ ಟಿ20 ವಿಶ್ವಕಪ್ ಗೆದ್ದಿರುವ ರೋಹಿತ್ ಇಲ್ಲಿಗೇ ತಮ್ಮ ಪಯಣ ನಿಲ್ಲಲ್ಲ ಎಂದಿದ್ದಾರೆ. ಮುಂದೆ ಚಾಂಪಿಯನ್ಸ್ ಟ್ರೋಫಿ, ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಬರಲಿದ್ದು, ಇದರ ಬೆನ್ನಲ್ಲೇ ನಾನೀಗಾಗಲೇ ಗೆಲುವಿನ ರುಚಿ ಕಂಡಿದ್ದೇನೆ. ನನ್ನ ಗೆಲುವಿನ ಹಸಿವು ಇಲ್ಲಿಗೆ ನಿಲ್ಲಲ್ಲ ಎಂದಿದ್ದಾರೆ.
ನಾನು 5 ಐಪಿಲ್ ಟ್ರೋಫಿ ಗೆಲ್ಲುವುದಕ್ಕೂ ಕಾರಣವಿದೆ. ನಾನು ಒಂದು ಗೆಲುವಿಗೆ ನಿಲ್ಲುವವನಲ್ಲ. ಒಂದು ಗೆಲುವು ಕಂಡ ಮೇಲೆ ಗೆಲುವಿನ ರುಚಿ ಕಂಡ ಮೇಲೆ ಅಲ್ಲಿಗೇ ನಿಲ್ಲಲು ಮನಸ್ಸಾಗುವುದಿಲ್ಲ. ಮತ್ತಷ್ಟು ಗೆಲುವಿನ ಹಸಿವು ಮೂಡುತ್ತದೆ. ಭವಿಷ್ಯದಲ್ಲೂ ನಾವು ಗೆಲುವಿನ ಹಸಿವು ತಣಿಸಲು ಪ್ರಯತ್ನಿಸಲಿದ್ದೇವೆ ಎಂದು ಎದುರಾಳಿಗಳಿಗೆ ವಾರ್ನ್ ಮಾಡಿದ್ದಾರೆ.