ಜೈಪುರ: ಐಪಿಎಲ್ ನಲ್ಲಿ ನಾಯಕನಾಗಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಸಂಜು ಸ್ಯಾಮ್ಸನ್ ಟಿ20 ಕ್ರಿಕೆಟ್ ನಲ್ಲಿ ಭಾರತದ ಭವಿಷ್ಯದ ನಾಯಕನಾಗಬೇಕು ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.
ಸಂಜು ಸ್ಯಾಮ್ಸನ್ ಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುವುದೇ ಅಪರೂಪವಾಗಿದೆ. ಆದರೆ ಈಗ ಐಪಿಎಲ್ ನಲ್ಲಿ ನಾಯಕನಾಗಿ ಮತ್ತು ಬ್ಯಾಟಿಗನಾಗಿ ಎರಡೂ ಪಾತ್ರವನ್ನು ಅವರು ಯಶಸ್ವಿಯಾಗಿ ನಿಭಾಯಿಸುತ್ತಿರುವುದು ನೋಡಿ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಫಿದಾ ಆಗಿದ್ದಾರೆ.
ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್, ಭಾರತದ ಭವಿಷ್ಯದ ಟಿ20 ಕ್ರಿಕೆಟ್ ತಂಡದ ನಾಯಕನಾಗುವ ಎಲ್ಲಾ ಅರ್ಹತೆ ಸಂಜು ಸ್ಯಾಮ್ಸನ್ ಗಿದೆ ಎಂದಿದ್ದಾರೆ. ಒಬ್ಬ ನಾಯಕನಾಗಿ ತಂಡದ ಸಹ ಆಟಗಾರರನ್ನು ನಡೆಸಿಕೊಳ್ಳುವುದು, ಅವರನ್ನು ಸಮರ್ಥವಾಗಿ ಬಳಸಿಕೊಳ್ಳುವುದರಲ್ಲಿ ಸ್ಯಾಮ್ಸನ್ ಇದುವರೆಗೆ ಪೂರ್ಣ ಅಂಕ ಗಳಿಸಿದ್ದಾರೆ.
ಇನ್ನೇನು ಟಿ20 ವಿಶ್ವಕಪ್ ಆರಂಭವಾಗಲಿದ್ದು, ಭಾರತ ತಂಡದ ಆಯ್ಕೆ ಪ್ರಕ್ರಿಯೆ ಸದ್ಯದಲ್ಲೇ ನಡೆಯಲಿದೆ. ಒಂದು ವೇಳೆ ಈ ತಂಡದಲ್ಲಿ ಸಂಜು ಸ್ಯಾಮ್ಸನ್ ಗೆ ಅವಕಾಶ ನೀಡದೇ ಇದ್ದರೆ ಅದು ಅವರಿಗೆ ಮಾಡುವ ದೊಡ್ಡ ಅನ್ಯಾಯವಾಗಲಿದೆ. ಟಿ20 ತಂಡದಲ್ಲಿ ರಿಷಬ್ ಪಂತ್ ಗಿಂತ ಮೊದಲು ಸಂಜು ಸ್ಯಾಮ್ಸನ್ ಗೆ ಆದ್ಯತೆ ನೀಡಬೇಕು ಎಂಬುದು ಅಭಿಮಾನಿಗಳ ಅಭಿಪ್ರಾಯ. ಒಂದು ವೇಳೆ ಈ ಐಪಿಎಲ್ ಕೂಟವನ್ನು ಸಂಜು ನೇತೃತ್ವದಲ್ಲಿ ರಾಜಸ್ಥಾನ್ ಗೆದ್ದರೆ ಅದು ಅವರಿಗೆ ಮತ್ತೊಂದು ಪ್ಲಸ್ ಪಾಯಿಂಟ್ ಆಗಲಿದೆ.