ಲಂಡನ್: ಮ್ಯಾಂಚೆಸ್ಟರ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಕುತೂಹಲ ಘಟ್ಟ ತಲುಪಿದೆ. ಮೊದಲ ಇನಿಂಗ್ಸ್‌ನಲ್ಲಿ ಭಾರೀ ಹಿನ್ನಡೆ ಅನುಭವಿಸಿದ ಭಾರತ ಸೋಲನ್ನು ತಪ್ಪಿಸಲು ಹೋರಾಟ ನಡೆಸುತ್ತಿದೆ.
ನಾಲ್ಕನೇ ಟೆಸ್ಟ್‌ನ ನಾಲ್ಕನೇ ದಿನದ ಅಂತ್ಯಕ್ಕೆ ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 174/2 ರನ್ ಗಳಿಸಿದೆ. ಭಾರತ ಆಂಗ್ಲರಿಗಿಂತ ಇನ್ನೂ 137 ರನ್‌ಗಳ ಹಿಂದಿದೆ. ಪಂದ್ಯದ ಕೊನೆಯ ದಿನದಂದು ಗಿಲ್ ಮತ್ತು ಕೆ.ಎಲ್. ರಾಹುಲ್ ನಡೆಸುವ ಬ್ಯಾಟಿಂಗ್ ವೈಖರಿ ಮೇಲೆ ತಂಡದ ಗೆಲುವು, ಸೋಲು ನಿರ್ಧಾರವಾಗಲಿದೆ.
ಮೊದಲ ಇನಿಂಗ್ಸ್‌ನಲ್ಲಿ ಚೆಂಡು ಕಾಲಿಗೆ ಬಡಿದು, ಕಾಲಿನ ಬೆರಳು ಮುರಿದುಕೊಂಡಿರುವ ರಿಷಭ್ ಪಂತ್ ಎರಡನೇ ಇನಿಂಗ್ಸ್‌ನಲ್ಲಿ ಕಣಕ್ಕೆ ಇಳಿಯುವ ಬಗ್ಗೆ ಚರ್ಚೆ ನಡೆಯುತ್ತಿದೆ. ಮೊದಲ ಇನಿಂಗ್ಸ್‌ನಲ್ಲಿ ಅವರು ಅಮೋಘ ಅರ್ಧಶತಕ ದಾಖಲಿಸಿದ್ದರು.
ರಿಷಭ್ ಬ್ಯಾಟಿಂಗ್ ಲಭ್ಯತೆ ಬಗ್ಗೆ ಬ್ಯಾಟಿಂಗ್ ಕೋಚ್ ಸಿತಾಂಶು ಕೊಟಕ್ ಪ್ರತಿಕ್ರಿಯಿಸಿ, ನಾಲ್ಕನೇ ಟೆಸ್ಟ್‌ನ ಐದನೇ ಹಾಗೂ ಕೊನೆ ದಿನದ ಎರಡನೇ ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ಬ್ಯಾಟಿಂಗ್ ಮಾಡಲಿದ್ದಾರೆ. ತಂಡದ ಪರ ಅವರು ಬ್ಯಾಟ್ ಮಾಡುವುದು ಖಚಿತ ಎಂದು ಹೇಳಿದ್ದಾರೆ.
ಐದು ಟೆಸ್ಟ್ ಸರಣಿಯಲ್ಲಿ 1-2 ಹಿನ್ನಡೆಯಲ್ಲಿರುವ ಟೀಮ್ ಇಂಡಿಯಾ, ಗೆಲುವಿನ ಭರವಸೆಯನ್ನು ಇನ್ನೂ ಜೀವಂತವಾಗಿರಿಸಿದೆ. ಈ ಪಂದ್ಯವನ್ನು ಗೆಲ್ಲಬೇಕು ಅಥವಾ ಡ್ರಾ ಮಾಡಿಕೊಳ್ಳಬೇಕು ಎಂದು ಭಾರೀ ಕಸರತ್ತು ನಡೆಸುತ್ತಿದೆ.
ಸದ್ಯ ಕ್ರೀಸ್‌ನಲ್ಲಿ ಕೆ.ಎಲ್. ರಾಹುಲ್ (87 ರನ್) ಮತ್ತು ನಾಯಕ ಶುಭಮನ್ ಗಿಲ್ (78 ರನ್) ಆಡುತ್ತಿದ್ದಾರೆ. ಇಂದು ರಾಹುಲ್ ಮತ್ತು ಗಿಲ್ ಜೋಡಿ 4ನೇ ದಿನದಂದು ನಡೆಸಿದ ಹೋರಾಟದ ಮನೋಭಾವವನ್ನು ಕೊನೆಯ ದಿನವೂ ಮುಂದುವರಿಸಿದರೆ, ನಾಲ್ಕನೇ ಟೆಸ್ಟ್ ಡ್ರಾದತ್ತ ಸಾಗಲಿದೆ.
ಭಾರತ ಮೊದಲ ಇನಿಂಗ್ಸ್‌ನಲ್ಲಿ 358 ರನ್ ಗಳಿಸಿತ್ತು. ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್ ತಂಡ 669 ರನ್ ಗಳಿಸಿ 311 ರನ್‌ಗಳ ಮುನ್ನಡೆ ಪಡೆದಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಭಾರತ 2 ವಿಕೆಟ್‌ಗೆ 174 ರನ್ ಗಳಿಸಿದೆ.