ಹೊಸ ವರ್ಷದ ಮರುದಿನವೇ ಬಿಸಿಸಿಐಗೆ ಕಾದಿದೆ ಶಾಕ್!

ಭಾನುವಾರ, 1 ಜನವರಿ 2017 (07:46 IST)
ನವದೆಹಲಿ: ಹೊಸ ವರ್ಷದ ಮರುದಿನವೇ ಹೊಸ ಶಾಕ್ ಎದುರಿಸಲು ಬಿಸಿಸಿಐ ಸಜ್ಜಾಗಬೇಕಿದೆ. ನಾಳೆ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಮೇಲೆ ಹೊರಿಸಿದ ಆರೋಪದ ಮೇಲೆ ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ.


ಲೋಧಾ ಸಮಿತಿಯ ಒಂದು ಪ್ರಸ್ತಾವನೆಗೆ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಐಸಿಸಿ ಕೇಳಿದೆ ಎಂದು ಸುಳ್ಳು ಪ್ರಮಾಣ ಪತ್ರ ನೀಡಿದ ಹಿನ್ನಲೆಯಲ್ಲಿ ಠಾಕೂರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಅದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್  ಬಿಸಿಸಿಐ ಅಧ್ಯಕ್ಷರ ಹಣೆಬರಹ ಬರೆಯಲಿದೆ. ಆರೋಪ ಸಾಬೀತಾದಲ್ಲಿ ಜೈಲಿಗೆ ಹೋಗಲು ತಯಾರಾಗಿ ಎಂದು ನ್ಯಾಯಾಲಯ ಈ ಮೊದಲೇ ಎಚ್ಚರಿಸಿತ್ತು.

ಅಲ್ಲದೆ ಲೋಧಾ ಸಮಿತಿ ವರದಿ ಜಾರಿಗೆ ತರದಿದ್ದರೆ, ಬಿಸಿಸಿಐನ ಉನ್ನತ ಅಧಿಕಾರಿಗಳನ್ನು ಅಮಾನತುಗೊಳಿಸಿ ವರದಿ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಈ ಮೊದಲು ಹೇಳಿತ್ತು. ಒಂದು ವೇಳೆ ನ್ಯಾಯಾಲಯ ಹೀಗೆ ಮಾಡಿದರೆ, ಅಧ್ಯಕ್ಷ ಅನುರಾಗ್ ಠಾಕೂರ್ ಸೇರಿದಂತೆ ಬಿಸಿಸಿಐನ ಉನ್ನತ ಅಧಿಕಾರಿಗಳ ಸ್ಥಾನಕ್ಕೆ ಬೇರೆ ಅಧಿಕಾರಿಗಳನ್ನು ನೇಮಿಸಬಹುದು.

ಈ ಎಲ್ಲಾ ಹಿನ್ನಲೆಯಲ್ಲಿ ಬಿಸಿಸಿಗೆ ಸೋಮವಾರ ನಿರ್ಣಾಯಕ ದಿನವಾಗಲಿದೆ. ಇದೇ ವೇಳೆ ಭಾರತದವರೇ ಆದ ಐಸಿಸಿ ಅಧ್ಯಕ್ಷ ಶಶಾಂಕ್ ಮನೋಹರ್ ಬಿಸಿಸಿಐಗೆ ಪತ್ರ ಬರೆದಿರುವುದಾಗಿ ಲೋಧಾ ಸಮಿತಿಗೆ ಹೇಳಿರುವುದರಿಂದ ಬಿಸಿಸಿಐ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲೂ ಸಾಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ