ಶ್ರೇಯಸ್ ಅಯ್ಯರ್ ದುರಾದೃಷ್ಟ! ಗಿಲ್-ಋತುರಾಜ್ ಗಾಯಕವಾಡ್ ಅರ್ಧಶತಕ
ಆಸ್ಟ್ರೇಲಿಯಾ ನೀಡಿದ 277 ರನ್ ಗಳ ಗುರಿ ಬೆನ್ನತ್ತಿರುವ ಟೀಂ ಇಂಡಿಯಾ ಆರಂಭಿಕರಾದ ಶುಬ್ಮನ್ ಗಿಲ್, ಋತುರಾಜ್ ಗಾಯಕ್ ವಾಡ್ ಶತಕದ ಜೊತೆಯಾಟ ನೀಡಿ ಉತ್ತಮ ಆರಂಭ ಒದಗಿಸಿದರು. ಆದರೆ ವೇಗಿಗಳನ್ನು ಮನಸೋ ಇಚ್ಛೆ ದಂಡಿಸಿದ ಜೋಡಿ ಸ್ಪಿನ್ ದಾಳಿಗಿಳಿಯುತ್ತಿದ್ದಂತೇ ಬೇರ್ಪಟ್ಟಿತು. ಋತುರಾಜ್ 71 ರನ್ ಗಳಿಸಿ ಆಡಂ ಝಂಪಾಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ಶ್ರೇಯಸ್ ಅಯ್ಯರ್ ದುರಾದೃಷ್ಟವಶಾತ್ 3 ರನ್ ಗಳಿಸಿದ್ದಾಗ ರನ್ ಕದಿಯಲೆತ್ನಿಸಿ ರನೌಟ್ ಆದರು. ವಿಶ್ವಕಪ್ ಗೆ ಮುನ್ನ ಫಾರ್ಮ್ ಗೆ ಬರಲು ಹವಣಿಸುತ್ತಿರುವ ಅಯ್ಯರ್ ತೀವ್ರ ನಿರಾಸೆ ಅನುಭವಿಸಿದರು.
ಶ್ರೇಯಸ್ ಔಟಾದ ಬೆನ್ನಲ್ಲೇ 74 ರನ್ ಗಳಿಸಿದ್ದಾಗ ಗಿಲ್ ಕೂಡಾ ಝಂಪಾ ಎಸೆತಕ್ಕೆ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡಾಗ ಟೀಂ ಇಂಡಿಯಾ ಕೊಂಚ ಸಂಕಷ್ಟಕ್ಕೀಡಾಯಿತು. ಇದೀಗ ಕ್ರೀಸ್ ನಲ್ಲಿ 15 ರನ್ ಗಳಿಸಿರುವ ಕೆಎಲ್ ರಾಹುಲ್ ಮತ್ತು 18 ರನ್ ಗಳಿಸಿರುವ ಇಶಾನ್ ಕಿಶನ್ ಬ್ಯಾಟಿಂಗ್ ಮಾಡುತ್ತಿದ್ದಾರೆ.