ಸೂಪರ್ ಓವರ್ ನಲ್ಲಿ ಆಸ್ಟ್ರೇಲಿಯಾ ಮಣಿಸಿದ ಭಾರತ ಮಹಿಳೆಯರ ಕ್ರಿಕೆಟ್ ತಂಡ

ಸೋಮವಾರ, 12 ಡಿಸೆಂಬರ್ 2022 (08:40 IST)
Photo Courtesy: Twitter
ಮುಂಬೈ: ಭಾರತ ಮಹಿಳಾ ಕ್ರಿಕೆಟ್ ಪ್ರಿಯರು ನಿನ್ನೆ ಅದ್ಭುತ ಪಂದ್ಯವೊಂದಕ್ಕೆ ಸಾಕ್ಷಿಯಾದರು. ಮಹಿಳಾ ಕ್ರಿಕೆಟ್ ಕೂಡಾ ಪುರುಷರ ಕ್ರಿಕೆಟ್ ನಷ್ಟೇ ರೋಚಕ ಎನ್ನುವುದನ್ನು ಈ ಪಂದ್ಯ ಸಾಬೀತುಪಡಿಸಿದೆ.

ವಿಶ್ವಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ನಿನ್ನೆ ನಡೆದ ಎರಡನೇ ಟಿ20 ಪಂದ್ಯವನ್ನು ಹರ್ಮನ್ ಪ್ರೀತ್ ಕೌರ್ ಪಡೆ ಸೂಪರ್ ಓವರ್ ನಲ್ಲಿ ಗೆದ್ದು ಸರಣಿ ಸಮಬಲಗೊಳಿಸಿದೆ. ಗೆಲ್ಲಲು 187 ರನ್ ಗಳಿಸಬೇಕಿದ್ದ ಭಾರತ ತಂಡ ಸ್ಮೃತಿ ಮಂಧನಾ, ರಿಚಾ ಘೋಷ್ ಅದ್ಭುತ ಬ್ಯಾಟಿಂಗ್ ನಿಂದಾಗಿ ಪಂದ್ಯ ಟೈ ಗೊಳಿಸುವಲ್ಲಿ ಯಶಸ್ವಿಯಾಯಿತು. ಬಳಿಕ ಸೂಪರ್ ಓವರ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿ 21 ರನ್ ಗಳ ಗುರಿ ನೀಡಿದ ಭಾರತ ಎದುರಾಳಿಯನ್ನು 16 ರನ್ ಗೆ ಕಟ್ಟಿ ಹಾಕುವ ಮೂಲಕ ಗೆಲುವಿನ ಕೇಕೆ ಹಾಕಿತು.

ಮೊದಲು ಬ್ಯಾಟಿಂಗ್ ಮಾಡಿದ್ದ ಆಸೀಸ್ ಕೇವಲ 1 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಮೂನಿ 82, ತಹ್ಲಿಯಾ ಮೆಕ್ ಗ್ರಾತ್ 70 ರನ್ ಗಳಿಸಿ ಮಿಂಚಿದರು. ಭಾರತದ ಪರ ಏಕೈಕ ವಿಕೆಟ್ ದೀಪ್ತಿ ಶರ್ಮಾ ಪಾಲಾಯಿತು.

ಆಸ್ಟ್ರೇಲಿಯಾ ವಿರುದ್ಧ ಈ ಮೊತ್ತ ಬೆನ್ನತ್ತುವುದು ಸುಲಭದ ಮಾತಲ್ಲ. ಆದರೆ ಭಾರತಕ್ಕೆ ಗೆಲ್ಲಲೇ ಬೇಕಾದ ಒತ್ತಡವಿತ್ತು. ಈ ಹಂತದಲ್ಲಿ ಸ್ಮೃತಿ ಮಂಧನಾ-ಶಫಾಲಿ ವರ್ಮಾ ಸ್ಪೋಟಕ ಆರಂಭ ನೀಡಿದರು. ದುರದೃಷ್ಟವಶಾತ್ ಶಫಾಲಿ 34 ರನ್ ಗೆ ವಿಕೆಟ್ ಒಪ್ಪಿಸಿದರು. ಆದರೆ 17 ನೆಯ ಓವರ್ ವರೆಗೂ ಬ್ಯಾಟಿಂಗ್ ನಡೆಸಿದ ಸ್ಮೃತಿ ಕೇವಲ 49 ಎಸೆತಗಳಲ್ಲಿ 79 ರನ್ ಗಳಿಸಿ ಔಟಾದರು. ಬೃಹತ್ ಹೊಡೆತಕ್ಕೆ ಕೈ ಹಾಕುವ ಅನಿವಾರ್ಯತೆ ಇದ್ದಾಗ ಪ್ಲೇಯ್ಡ್ ಆನ್ ವಿಕೆಟ್ ಆಗಿ ನಿರಾಸೆ ಅನುಭವಿಸಿದರು.

ಈ ಹಂತದಲ್ಲಿ ಭಾರತಕ್ಕೆ ಆಸರೆಯಾಗಿದ್ದು ರಿಚಾ ಘೋಷ್. ಕೇವಲ 13 ಎಸೆತಗಳಿಂದ 3 ಸಿಕ್ಸರ್ ಸಹಿತ ಅಜೇಯ 26 ರನ್ ಗಳಿಸಿದ ರಿಚಾ ಭಾರತವನ್ನು ಗೆಲುವಿನ ಸನಿಹ ಕೊಂಡೊಯ್ದಿದ್ದರು. ಆದರೆ ಅಂತಿಮ ಓವರ್ ನಲ್ಲಿ ಅವರಿಗೆ ಹೆಚ್ಚು ಬ್ಯಾಟಿಂಗ್ ಅವಕಾಶ ದೊರೆಯಲಿಲ್ಲ. ಆದರೆ ದೇವಿಕಾ ವೈದ್ಯ ಕೊನೆಯ ಎಸೆತದಲ್ಲಿ 5 ರನ್ ಬೇಕಾಗಿದ್ದಾಗ ಬೌಂಡರಿ ಗಳಿಸಲು ಯಶಸ್ವಿಯಾದರು. ಇದರಿಂದ ಪಂದ್ಯ ಟೈ ಆಯಿತು. ಸೋಲುವ ಭೀತಿಯಲ್ಲಿದ್ದ ಭಾರತಕ್ಕೆ ಇದು ದೊಡ್ಡ ಉತ್ಸಾಹ ತುಂಬಿತು. ಬಳಿಕ ಸೂಪರ್ ಓವರ್ ನಲ್ಲಿ ಹರ್ಮನ್ ಪಡೆ ಪಂದ್ಯ ತಮ್ಮದಾಗಿಸಿಕೊಂಡಿತು.

ಸರಣಿಯ ಕೊನೆಯ ಪಂದ್ಯ ಬುಧವಾರ ಬ್ರೆಬೋರ್ನ್ ಮೈದಾನದಲ್ಲಿ ನಡೆಯಲಿದ್ದು, ಈ ಪಂದ್ಯ ವೀಕ್ಷಣೆಗೆ ಪ್ರೇಕ್ಷಕರಿಗೆ ಉಚಿತ ಅವಕಾಶವಿದೆ. ಈ ಮೂಲಕ ಮಹಿಳಾ ಕ್ರಿಕೆಟ್ ನ್ನು ಪ್ರೋತ್ಸಾಹಿಸಲು ಬಿಸಿಸಿಐ ಕ್ರಮ ಕೈಗೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ