ಬೆಂಗಳೂರು: ದ ಆಫ್ರಿಕಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲೂ ಶತಕ ಸಿಡಿಸಿ ದಾಖಲೆ ಬರೆದ ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನಗೆ ಗೆಳೆಯನಿಂದ ವಿಶೇಷ ಮೆಚ್ಚುಗೆ ಸಿಕ್ಕಿದೆ.
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸ್ಮೃತಿ ಮಂಧಾನ ಶತಕ ಸಿಡಿಸಿ ಮಿಂಚಿದ್ದರು. ನಿನ್ನೆ ನಡೆದ ಎರಡನೇ ಏಕದಿನ ಪಂದ್ಯದಲ್ಲೂ ಅವರು ಶತಕ ಸಿಡಿಸಿದ್ದಾರೆ. ಈ ಮೂಲಕ ಮಹಿಳಾ ಕ್ರಿಕೆಟ್ ನಲ್ಲಿ ಸತತ ಎರಡು ಶತಕ ಸಿಡಿಸಿದ ದಾಖಲೆ ಮಾಡಿದ್ದಾರೆ. ಅಲ್ಲದೆ, ಭಾರತದ ಪರ ಗರಿಷ್ಠ ಶತಕ ಸಿಡಿಸಿದ ಮಿಥಾಲಿ ರಾಜ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಈ ಪಂದ್ಯದಲ್ಲಿ ಹರ್ಮನ್ ಪ್ರೀತ್ ಕೌರ್ ಕೂಡಾ ಶತಕ ದಾಖಲಿಸಿದ್ದರು. ಅಲ್ಲದೆ, ಭಾರತ ಕೊನೆಯ ಓವರ್ ನಲ್ಲಿ ರೋಚಕವಾಗಿ ಪಂದ್ಯ ಗೆದ್ದುಕೊಂಡು ಸರಣಿ ತನ್ನದಾಗಿಸಿಕೊಂಡಿತ್ತು. ಸ್ಮೃತಿ ಮಂಧಾನ ಶತಕದ ಸಂಭ್ರಮವನ್ನು ಅವರ ಗೆಳೆಯ ಪಾಲಾಶ್ ಮುಚ್ಚಲ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.
ಸ್ಮೃತಿ ಅನ್ ಸ್ಟಾಪೇಬಲ್ ಎಂದು ಪಾಲಾಶ್ ಬರೆದುಕೊಂಡಿದ್ದಾರೆ. ಸಿನಿಮಾ ರಂಗದಲ್ಲಿರುವ ಪಾಲಾಶ್ ಗಾಯಕ, ಸಂಗೀತ ನಿರ್ದೇಶಕ ಕೂಡಾ. ಸ್ಮೃತಿ ಮತ್ತು ಪಾಲಾಶ್ ಕಳೆದ ಕೆಲವು ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇಬ್ಬರೂ ಆಗಾಗ ತಮ್ಮ ಸುಂದರ ಕ್ಷಣಗಳ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.