ಆಸ್ಟ್ರೇಲಿಯಾ ವಿರುದ್ಧ ಹಗಲು ರಾತ್ರಿ ಪಂದ್ಯ ದೃಢಪಡಿಸಿದ ದಕ್ಷಿಣ ಆಫ್ರಿಕಾ

ಬುಧವಾರ, 8 ಜೂನ್ 2016 (15:31 IST)
ಆಸ್ಟ್ರೇಲಿಯಾ ವಿರುದ್ಧ ನವೆಂಬರ್ 24ರಿಂದ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಅಡೆಲೈಡ್‌ನಲ್ಲಿ  ಆಡುವುದಾಗಿ ದಕ್ಷಿಣ ಆಫ್ರಿಕಾ ದೃಢಪಡಿಸಿದೆ. ಮುಂಬರುವ ಆಸ್ಟ್ರೇಲಿಯಾದ ಬೇಸಿಗೆ ಕ್ರಿಕೆಟ್‌ ಪಂದ್ಯಗಳಲ್ಲಿ ಇದು 2 ಹಗಲು-ರಾತ್ರಿ ಪಂದ್ಯಗಳ ಪೈಕಿ ಮೊದಲ ಪಂದ್ಯವಾಗಿದ್ದು, ಪಾಕಿಸ್ತಾನವು ಡಿ. 15ರಿಂದ ಬ್ರಿಸ್ಬೇನ್‌ನಲ್ಲಿ  ಹಗಲು-ರಾತ್ರಿ ಪಂದ್ಯವಾಡಲಿದೆ.
 
ಕೆಲವು ತಿಂಗಳಿಂದ ಅನೇಕ ದಕ್ಷಿಣ ಆಫ್ರಿಕಾ ಆಟಗಾರರು ಟೆಸ್ಟ್ ಪಂದ್ಯವನ್ನು ನಸುಗೆಂಪು ಚೆಂಡಿನಲ್ಲಿ ಆಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.  ಆದರೆ ಈ ಕುರಿತು ಸಾಕಷ್ಟು ಪ್ರಯೋಗ ಮಾಡದೇ ನಸುಗೆಂಪು ಚೆಂಡಿನಲ್ಲಿ ಆಡುವುದಕ್ಕೆ ಅಪಸ್ವರ ಎತ್ತಿದ್ದರು. ಈಗ ದಕ್ಷಿಣ ಆಫ್ರಿಕಾ ಅಕ್ಟೋಬರ್ ಮಧ್ಯಾವಧಿಯಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡು ಅಡೆಲೈಡ್ ಓವಲ್‌ನಲ್ಲಿ ಹಗಲು ರಾತ್ರಿ ಎರಡು ದಿನಗಳ ಪಂದ್ಯವನ್ನು ಫ್ಲಡ್‌ಲೈಟ್ ಅಡಿಯಲ್ಲಿ ಆಡಲಿದೆ.  ಮೂರನೇ ಮತ್ತು ಅಂತಿಮ ಟೆಸ್ಟ್‌ಗೆ ಮುನ್ನ ಇನ್ನೊಂದು ಎರಡು ದಿನಗಳ ಹಗಲು-ರಾತ್ರಿ ಪಂದ್ಯವಾಡಲಿದೆ. 
 
 ಆಟಗಾರರ ಜತೆ ಎಚ್ಚರಿಕೆಯ ಮಾತುಕತೆಯ ಬಳಿಕ ಹಗಲು ರಾತ್ರಿ ಟೆಸ್ಟ್ ಪಂದ್ಯವನ್ನು ನಿರ್ಧರಿಸಲಾಗಿದೆ. ಯಾವುದೇ ಪೂರ್ವಭಾವಿ ಅನುಭವ ಮತ್ತು ಸಿದ್ಧತೆಯಿಲ್ಲದೇ ಇಂತಹ ಪ್ರಮುಖ ಟೆಸ್ಟ್ ಪಂದ್ಯ ಆಡುವುದಕ್ಕೆ ಆರಂಭದಲ್ಲಿ ಪ್ರೊಟೀಸ್ ಆಕ್ಷೇಪಿಸಿತ್ತು. ಆದರೆ ಅವರ ಆತಂಕಗಳನ್ನು ನಿವಾರಿಸಿದ ಬಳಿಕ ಮತ್ತು ಆ ಪಂದ್ಯಕ್ಕೆ ಸಿದ್ಧತೆ ನಡೆಸುವ ಸಂಭವನೀಯ ಆಯ್ಕೆಗಳ ಬಳಿಕ ಈ ನೂತನ ಟೆಸ್ಟ್ ಪಂದ್ಯದ ಬಗ್ಗೆ ಆಟಗಾರರು ಪುಳುಕಿತರಾಗಿದ್ದಾರೆ ಸಿಎಸ್‌ಎ ಮುಖ್ಯ ಎಕ್ಸಿಕ್ಯೂಟಿವ್  ಹೆರೂನ್ ಲಾರ್ಗಾಟ್ ತಿಳಿಸಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

 

ವೆಬ್ದುನಿಯಾವನ್ನು ಓದಿ