ರಾಜ್ಯ ಕ್ರಿಕೆಟ್ ಸಂಸ್ಥೆಗಳ ಮೇಲೆ ಸುಪ್ರೀಂ ಕೋರ್ಟ್ ತೀರ್ಪಿನ ಇಫೆಕ್ಟ್!

ಮಂಗಳವಾರ, 3 ಜನವರಿ 2017 (10:25 IST)
ನವದೆಹಲಿ: ಬಿಸಿಸಿಐ ಮೇಲೆ ಸುಪ್ರೀಂ ಕೋರ್ಟ್ ಚಾಟಿ ಬೀಸುತ್ತಿದ್ದಂತೆ, ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ ಬಿಸಿ ಮುಟ್ಟಿದೆ. ಇಷ್ಟರವರೆಗೆ ತಣ್ಣಗೆ ಕೂತಿದ್ದ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಇದೀಗ ಲೋಧಾ ಸಮಿತಿ ಅನುಷ್ಠಾನಕ್ಕೆ ಮುಂದಾಗಿವೆ.


ಅತ್ತ ಉಚ್ಛ ನ್ಯಾಯಾಲಯದ ತೀರ್ಪು ಹೊರ ಬೀಳುತ್ತಿದ್ದಂತೆ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಲೋಧಾ ಸಮಿತಿ ಮಾಡಿದ ಎಲ್ಲಾ ಶಿಫಾರಸ್ಸುಗಳ ಅನುಷ್ಠಾನಕ್ಕೆ ಮುಂದಾಗಿವೆ.  “ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಯಾವುದೇ ಅನುಮಾನಗಳಿಲ್ಲ. ತಕ್ಷಣದಿಂದಲೇ ಜಾರಿಯಾಗುವಂತೆ ಲೋಧಾ ಸಮಿತಿ ವರದಿಯನ್ನು ಅನುಷ್ಠಾನಕ್ಕೆ ತರುತ್ತೇವೆ” ಎಂದು ಗಂಗರಾಜು  ತಿಳಿಸಿದ್ದಾರೆ.

ಲೋಧಾ ಸಮಿತಿಯ ಶಿಫಾರಸ್ಸಿನಂತೆ ಬಿಸಿಸಿಐನ ಉನ್ನತ ಪದಾದಿಕಾರಿಗಳು, ಎರಡಕ್ಕಿಂತ ಹೆಚ್ಚು ಬಾರಿ ಅಧಿಕಾರ ಹೊಂದುವಂತಿಲ್ಲ ಎಂದಿದೆ. ಆದರೆ ಕೇರಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಟಿಕೆ ಮ್ಯಾಥ್ಯೂ 20 ವರ್ಷದಿಂದ ಅಧಿಕಾರದಲ್ಲಿದ್ದಾರೆ. ಹೀಗಾಗಿ ಅವರೂ ಕೂಡಲೇ ಪದ ತ್ಯಾಗ ಮಾಡಿದ್ದಾರೆ.

ಇನ್ನು ಮುಂಬೈ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಶರದ್ ಪವಾರ್ ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಲ್ಲದೆ ಒಂದು ರಾಜ್ಯಕ್ಕೆ ಒಂದು ವೋಟ್ ಎಂಬ ನಿಯಮದಡಿ ಇನ್ನು ಮುಂದೆ ಮುಂಬೈ ಕ್ರಿಕೆಟ್ ಸಂಸ್ಥೆ ಮತದ ಹಕ್ಕು ಕಳೆದುಕೊಳ್ಳಲಿದೆ. ಇನ್ನು, ತಮಿಳುನಾಡು ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಎನ್. ಶ್ರೀನಿವಾಸನ್ ಕೂಡಾ ವಯೋಮಿತಿಯ ಆಧಾರದಲ್ಲಿ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೂಡಾ ಲೋಧಾ ಸಮಿತಿ ವರದಿ ಪಾಲಿಸುವುದಾಗಿ ಹೇಳಿಕೊಂಡಿದೆ. ನ್ಯಾಯಾಲಯದ ಆದೇಶ ಪ್ರತಿ ಬಂದ ತಕ್ಷಣ ಅದರ ಪಾಲನೆಗೆ ಕ್ರಮ ಕೈಗೊಳ್ಳುವುದಾಗಿ ಹೇಳಿಕೊಂಡಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ