ಭಾರತ-ಇಂಗ್ಲೆಂಡ್ ಟಿ20: ಸೋಲಿನ ನಡುವೆ ಹೊಳೆದ ‘ಸೂರ್ಯ’

ಸೋಮವಾರ, 11 ಜುಲೈ 2022 (08:10 IST)
ನ್ಯಾಟಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆದ ಮೂರನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ ವೀರೋಚಿತವಾಗಿ 17 ರನ್ ಗಳಿಂದ ಸೋತಿದೆ.

ಆದರೆ ಈ ಪಂದ್ಯದಲ್ಲಿ ಹೈಲೈಟ್ ಆಗಿದ್ದ ಸೂರ್ಯಕುಮಾರ್ ಯಾದವ್ ಏಕಾಂಗಿ ಹೋರಾಟ. ಇಂಗ್ಲೆಂಡ್ ನೀಡಿದ್ದ 216 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾಗೆ ಯಥಾವತ್ತು ಅಗ್ರ ಕ್ರಮಾಂಕದ ಬ್ಯಾಟಿಗರು ಕೈ ಕೊಟ್ಟರು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ತಲಾ 11 ರನ್ ಗಳಿಸಿ ಔಟಾದರು. ರಿಷಬ್ ಪಂತ್ ಕೇವಲ 1 ರನ್ ಗೆ ಪೆವಿಲಿಯನ್ ಗೆ ಸೇರಿಕೊಂಡರು.

ಈ ವೇಳೆ ಶ್ರೇಯಸ್ ಅಯ್ಯರ್ ಗೆ ಜೊತೆಯಾದ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾಕ್ಕೆ ಗೆಲುವಿನ ಕನಸು ಚಿಗುರಿಸಿದರು. ಆದರೆ ಅಯ್ಯರ್ 28 ರನ್ ಗೆ ಔಟಾದಾಗ ಸೂರ್ಯ ಕುಮಾರ್ ಏಕಾಂಗಿ ಶೋ ನಡೆಸಬೇಕಾಯಿತು. ಕೇವಲ 55 ಎಸೆತಗಳಲ್ಲಿ ಭರ್ಜರಿ 117 ರನ್ ಗಳಿಸಿದ ಸೂರ್ಯಕುಮಾರ್ ಔಟಾಗುತ್ತಿದ್ದಂತೇ ಭಾರತದ ಸೋಲು ಖಚಿತವಾಯಿತು. ಒಂದು ವೇಳೆ ಸೂರ್ಯಗೆ ತಕ್ಕ ಸಾಥ್ ಸಿಗುತ್ತಿದ್ದರೆ ಭಾರತ ಈ ಪಂದ್ಯ ಗೆಲ್ಲುತ್ತಿತ್ತೇನೋ. ಆದರೆ ಕೊನೆಯಲ್ಲಿ ಭಾರತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಆದರೆ ಕಳೆದ ಎರಡು ಪಂದ್ಯ ಗೆದ್ದಿದ್ದರಿಂದ 2-1 ಅಂತರದಿಂದ ಸರಣಿ ಟೀಂ ಇಂಡಿಯಾ ಕೈವಶವಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ