ಟ್ರಿನಿಡಾಡ್: ಟಿ20 ವಿಶ್ವಕಪ್ 2024 ರಲ್ಲಿ ಉಗಾಂಡ ತಂಡವನ್ನು ಕೇವಲ 40 ರನ್ ಗಳಿಗೆ ಆಲೌಟ್ ಮಾಡಿದ್ದ ನ್ಯೂಜಿಲೆಂಡ್ ಔಪಚಾರಿಕ ಪಂದ್ಯದಲ್ಲಿ 9 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಉಗಾಂಡ ತಂಡ ಕಿವೀಸ್ ದಾಳಿಗೆ ತತ್ತರಿಸಿ 18.4 ಓವರ್ ಬ್ಯಾಟಿಂಗ್ ಮಾಡಿಯೂ ಗಳಿಸಿದ್ದು ಕೇವಲ 40 ರನ್. ಉಗಾಂಡ ಬ್ಯಾಟಿಗರು ಅಕ್ಷರಶಃ ಟೆಸ್ಟ್ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದರು. ಕೆ ವೈಸ್ವ 11 ರನ್ ಗಳಿಸಿದ್ದು ಬಿಟ್ಟರೆ ಉಳಿದೆಲ್ಲರದ್ದು ಏಕಂಕಿ ಸಾಧನೆ. ಕಿವೀಸ್ ಪರ ಟಿಮ್ ಸೌಥಿ 3, ಟ್ರೆಂಟ್ ಬೌಲ್ಟ್, ಸ್ಯಾಂಟ್ನರ್ ಮತ್ತು ರಚಿನ್ ರವೀಂದ್ರ ತಲಾ 2 ವಿಕೆಟ್ ಕಬಳಿಸಿದರು.
ಈ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ ಕೇವಲ 5.2 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿ ಗೆಲುವು ಕಂಡಿತು. ಫಿನ್ ಅಲೆನ್ 9, ಡೆವನ್ ಕಾನ್ವೆ 22 ರನ್ ಗಳಿಸಿದರು. ಅತ್ತ ನ್ಯೂಜಿಲೆಂಡ್ ನ ಏಕೈಕ ವಿಕೆಟ್ ಕೋಸ್ಮಸ್ ಪಾಲಾಯಿತು. ಈ ಫಲಿತಾಂಶ ಎರಡೂ ತಂಡಗಳಿಗೆ ಔಪಚಾರಿಕವಾಗಿತ್ತಷ್ಟೇ.
ಯಾಕೆಂದರೆ ಈಗಾಗಲೇ ಎರಡೂ ತಂಡಗಳೂ ಸೂಪರ್ 8 ರ ಘಟ್ಟದಿಂದ ಹೊರಬಿದ್ದಿವೆ. ಯಾಕೋ ಈ ಬಾರಿ ನ್ಯೂಜಿಲೆಂಡ್ ಟಿ20 ವಿಶ್ವಕಪ್ ನಲ್ಲಿ ನೀರಸ ಪ್ರದರ್ಶನ ನೀಡಿದೆ. ಹಾಗಿದ್ದರೂ ಈಗ ಕೊನೆಯದಾಗಿ ಗೆಲುವಿನ ತೃಪ್ತಿಪಟ್ಟುಕೊಳ್ಳುವಂತಾಗಿದೆ.