ಟಿ20 ವಿಶ್ವಕಪ್ 2024: ನ್ಯೂಯಾರ್ಕ್ ನಲ್ಲಿ ಕೊನೆಗೂ ಮುಗೀತು ಪಂದ್ಯ, ಟೀಂ ಇಂಡಿಯಾ ಮುಂದಿನ ಪಂದ್ಯ ಎಲ್ಲಿ

Krishnaveni K

ಶುಕ್ರವಾರ, 14 ಜೂನ್ 2024 (11:21 IST)
ನ್ಯೂಯಾರ್ಕ್: ಈ ಬಾರಿ ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಇದುವರೆಗೆ ಆಡಿದ ಎಲ್ಲಾ ಪಂದ್ಯಗಳನ್ನೂ ನ್ಯೂಯಾರ್ಕ್ ನ ನಾಸೌ ಕೌಂಟಿ ಮೈದಾನದಲ್ಲಿ ಆಡಿದೆ. ಇಲ್ಲಿಗೆ ನ್ಯೂಯಾರ್ಕ್ ನಲ್ಲಿ ವಿಶ್ವಕಪ್ ಪಂದ್ಯಗಳು ಮುಗಿದಿವೆ. ಇದೀಗ ಭಾರತದ ಮುಂದಿನ ಪಂದ್ಯಗಳು ಎಲ್ಲಿ ನಡೆಯುತ್ತವೆ ಇಲ್ಲಿದೆ ಡೀಟೈಲ್ಸ್.

ಟೀಂ ಇಂಡಿಯಾ ನ್ಯೂಯಾರ್ಕ್ ಗೆ ಕಾಲಿಟ್ಟಾಗಿನಿಂದ ಇಲ್ಲಿನ ಅವ್ಯವಸ್ಥೆ ಬಗ್ಗೆ ಟೀಂ ಇಂಡಿಯಾ ಅಸಮಾಧಾನ ಹೊರಹಾಕುತ್ತಲೇ ಇದೆ. ಇಲ್ಲಿನ ಮೈದಾನವೂ ಟಿ20 ಕ್ರಿಕೆಟ್ ಗೆ ಹೇಳಿ ಮಾಡಿಸಿದಂತಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಮೈದಾನದ ಔಟ್ ಫೀಲ್ಡ್ ನಿಧಾನಗತಿಯಿಂದ ಕೂಡಿತ್ತು, ಅಭಿಮಾನಿಗಳಿಗೂ ಬ್ಯಾಟಿಂಗ್ ಧಮಾಕ ನೋಡಲು ಸಿಗದೇ ನಿರಾಸೆಯಾಗಿತ್ತು.

ಇದೀಗ ಭಾರತ ಮುಂದಿನ ಪಂದ್ಯಗಳನ್ನು ಬೇರೆ ತಾಣಗಳಲ್ಲಿ ಆಡಲಿದೆ. ಟೀಂ ಇಂಡಿಯಾಕ್ಕೆ ಮುಂದಿನ ಪಂದ್ಯ ಜೂನ್ 15 ರಂದು ಕೆನಡಾ ವಿರುದ್ಧ ನಡೆಯಲಿದೆ. ಈ ಪಂದ್ಯ ನಡೆಯುವುದು ಫ್ಲೋರಿಡಾದಲ್ಲಿ. ಇಲ್ಲಿನ ಸೆಂಟ್ರಲ್ ಬೊವಾರ್ಡ್ ಪಾರ್ಕ್ ಆಂಡ್ ಕೌಂಟಿ ಸ್ಟೇಡಿಯಂನಲ್ಲಿ ಮುಂದಿನ ಪಂದ್ಯ ನಡೆಯಲಿದೆ. ಇದು ಕೊನೆಯ ಲೀಗ್ ಪಂದ್ಯವಾಗಿರಲಿದೆ.

ಇದಾದ ಬಳಿಕ ಟೀಂ ಇಂಡಿಯಾ ಸೂಪರ್ 8 ರ ಘಟ್ಟದ ಪಂದ್ಯವಾಡಲಿದೆ. ಈ ಪಂದ್ಯ ಜೂನ್ 20 ರಂದು ನಡೆಯುವುದು. ಇದು ವೆಸ್ಟ್ ಇಂಡೀಸ್ ನ ಬಾರ್ಬಡೋಸ್ ಮೈದಾನದಲ್ಲಿ ನಡೆಯಲಿದೆ. ಈ ಮೈದಾನಗಳು ಭಾರತಕ್ಕೆ ಚಿರಪರಿಚಿತವೇ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಭಾರತ ತಂಡದಿಂದ ಇನ್ನೂ ಉತ್ತಮ ಪ್ರದರ್ಶನ ನೋಡಬಹುದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ