ಟಿ20 ವಿಶ್ವಕಪ್ 2024: ನೇಪಾಳ ವಿರುದ್ಧ 1 ರನ್ ಗಳ ಗೆಲುವು ದಾಖಲಿಸಿದ ದ ಆಫ್ರಿಕಾ

Krishnaveni K

ಶನಿವಾರ, 15 ಜೂನ್ 2024 (09:03 IST)
Photo Credit: Facebook
ಕಿಂಗ್ ಸ್ಟೌನ್: ಟಿ20 ವಿಶ್ವಕಪ್ 2024 ರಲ್ಲಿ ಇಂದು ನೇಪಾಳ ವಿರುದ್ಧ ದ.ಆಫ್ರಿಕಾ ಕೊನೆಯ ಎಸೆತದಲ್ಲಿ ರೋಚಕವಾಗಿ 1 ರನ್ ಗಳಿಂದ ಗೆಲುವು ಸಾಧಿಸಿದೆ. ಎರಡೂ ತಂಡಗಳಿಗೂ ಇದು ಔಪಚಾರಿಕ ಪಂದ್ಯವಾಗಿತ್ತು. ಹಾಗಿದ್ದರೂ ಟಿ20 ಕ್ರಿಕೆಟ್ ನ ಎಲ್ಲಾ ರೋಚಕತೆಯೂ ಈ ಪಂದ್ಯದಲ್ಲಿತ್ತು.

ಮೊದಲು ಬ್ಯಾಟಿಂಗ್ ಮಾಡಿದ ದ. ಆಫ್ರಿಕಾ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 115 ರನ್ ಗಳಿಸಿತ್ತು. ಆರಂಭಿಕ ಹೆಂಡ್ರಿಕ್ಸ್ 43, ತ್ರಿಸ್ತಾನ್ ಸ್ಟಬ್ಸ್ ಅಜೇಯ 27 ರನ್ ಗಳಿಸಿದರು. ಉಳಿದವರಿಂದ ಹೇಳಿಕೊಳ್ಳುವಂತಹ ಕೊಡುಗೆ ಬರಲಿಲ್ಲ. ನೇಪಾಳ ಪರ ಕುಶಾಲ್ 4, ದೀಪೇಂದ್ರ ಸಿಂಗ್ 3 ವಿಕೆಟ್ ಕಬಳಿಸಿದರು.

ಈ ಮೊತ್ತ ಬೆನ್ನತ್ತಿದ ನೇಪಾಳ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 114 ರನ್ ಗಳಿಸಲಷ್ಟೇ ಶಕ್ತವಾಯಿತು. ನೇಪಾಳದ ಆರಂಭ ಉತ್ತಮವಾಗಿತ್ತು ಆಸಿಫ್ ಶೇಖ್ 42 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಅನಿಲ್ ಶಾ 27 ರನ್ ಗಳಿಸಿ ಸಾಥ್ ನೀಡಿದರು. ಆದರೆ ಕೊನೆಯ ಓವರ್ ಥ್ರಿಲ್ಲಿಂಗ್ ಆಗಿತ್ತು.

ಅಂತಿಮ 3 ಬಾಲ್ ನಲ್ಲಿ ನೇಪಾಳಕ್ಕೆ 4 ರನ್ ಬೇಕಾಗಿತ್ತು. ಈ ವೇಳೆ ಆಫ್ರಿಕಾ ಪರ ಬಾರ್ಟ್ ಮಾನ್ ಬೌಲಿಂಗ್ ನಡೆಸುತ್ತಿದ್ದರು. ಎದುರಾಳಿ ತಂಡದ ಗುಲ್ಶನ್ ಕ್ರೀಸ್ ನಲ್ಲಿದ್ದರು. ನಾಲ್ಕನೇ ಎಸೆತದಲ್ಲಿ ಗುಲ್ಶನ್ 2 ರನ್ ಪಡೆದರು. ಆದರೆ ಐದನೇ ಎಸೆತದಲ್ಲಿ ರನ್ ಗಳಿಸಲು ವಿಫಲರಾದರು. ಇದರಿಂದಾಗಿ ಅಂತಿಮ ಎಸೆತದಲ್ಲಿ ಗುಲ್ಶನ್ ಎರಡು ರನ್ ಗಳಿಸುವ ಒತ್ತಡದಲ್ಲಿ ರನೌಟ್ ಆದರು. ಇದರಿಂದಾಗಿ ನೇಪಾಳ ಕೇವಲ 1 ರನ್ ಗಳಿಂದ ಸೋತು ನಿರಾಸೆ ಅನುಭವಿಸಿತು. ಆಫ್ರಿಕಾ ಪರ ಶಂಸಿ 4 ವಿಕೆಟ್ ಕಬಳಿಸಿ ಮಿಂಚಿದರು. ಈ ಪಂದ್ಯ ಗೆದ್ದರೂ ನೇಪಾಳ ಸೂಪರ್ 8 ಕ್ಕೆ ಏರಲು ಸಾಧ್ಯವಾಗುತ್ತಿರಲಿಲ್ಲ. ಇತ್ತ ಆಫ್ರಿಕಾ ಈಗಾಗಲೇ ಸೂಪರ್ 8ಕ್ಕೇರಿರುವುದರಿಂದ ಇದು ಔಪಚಾರಿಕವಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ