T20 World Cup 2024: ನ್ಯೂಜಿಲೆಂಡ್ ಸೋಲಿಸಿದ ವೆಸ್ಟ್ ಇಂಡೀಸ್ ಸೂಪರ್ 8 ಕ್ಕೆ

Krishnaveni K

ಗುರುವಾರ, 13 ಜೂನ್ 2024 (09:53 IST)
ಟ್ರಿನಿಡಾಡ್: ಟಿ20 ವಿಶ್ವಕಪ್ 2024 ರಲ್ಲಿ ನ್ಯೂಜಿಲೆಂಡ್ ವಿರುದ್ಧ 13 ರನ್ ಗಳಿಂದ ಗೆದ್ದ ಅತಿಥೇಯ ವೆಸ್ಟ್ ಇಂಡೀಸ್ ಸೂಪರ್ 8 ರ ಹಂತಕ್ಕೆ ಅರ್ಹತೆ ಪಡೆದಿದೆ. ವಿಶೇಷವೆಂದರೆ ಏಕದಿನ ವಿಶ್ವಕಪ್ ನಲ್ಲಿ ಅರ್ಹತೆಯನ್ನೇ ಪಡೆಯದಿದ್ದ ವಿಂಡೀಸ್ ಚುಟುಕು ಕ್ರಿಕೆಟ್ ನಲ್ಲಿ ತಾನು ಪ್ರಬಲ ತಂಡ ಎಂದು ಸಾಬೀತುಪಡಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು. ವೆಸ್ಟ್ ಇಂಡೀಸ್ ಪರ ಏಕಾಂಗಿಯಾಗಿ ಹೋರಾಟ ನಡೆಸಿದ್ದು ರುದರ್ ಫೋರ್ಡ್ 39 ಎಸೆತಗಳಿಂದ 68 ರನ್ ಸಿಡಿಸಿದರು. ಉಳಿದವರ ಸ್ಕೋರ್ 20 ರ ಗಡಿಯನ್ನೂ ದಾಟಲಿಲ್ಲ. ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್ 3, ಫರ್ಗ್ಯುಸನ್, ಟಿಮ್ ಸೌಥಿ ತಲಾ 2 ವಿಕೆಟ್ ಕಬಳಿಸಿದರು.

ಬೌಲರ್ ಗಳು ಹಾಕಿಕೊಟ್ಟ ಅಡಿಪಾಯವನ್ನು ಬ್ಯಾಟಿಗರು ಬಳಸಿಕೊಳ್ಳುವಲ್ಲಿ ವಿಫಲರಾದರು. 150 ರನ್ ಗಳ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ ಗೆ ಟಾಪ್ ಬ್ಯಾಟಿಗರು ಕೈಕೊಟ್ಟರು. ಆರಂಭಿಕ  ಫಿನ್ ಅಲೆನ್ 26 ರನ್ ಮತ್ತು ಗ್ಲೆನ್ ಫಿಲಿಪ್ಸ್ 40 ರನ್ ಗಳಿಸಿದರು. ಕೊನೆಯಲ್ಲಿ ಮಿಚೆಲ್ ಸ್ಯಾಂಟ್ನರ್ ಔಟಾಗದೇ 21 ರನ್ ಗಳಿಸಿದರು. ಆದರೆ ಈ ಮೂವರ ಹೋರಾಟ ವ್ಯರ್ಥವಾಯಿತು.

ವಿಂಡೀಸ್ ಪರ ಅಲ್ಝಾರಿ ಜೊಸೆಫ್ 4, ಗುಡಾಕೇಶ್ ಮೋಟಿ 3 ಕಬಳಿಸಿ ನ್ಯೂಜಿಲೆಂಡ್ ಗೆ ಭಾರೀ ಹೊಡೆತ ನೀಡಿದರು. ಅಂತಿಮವಾಗಿ ಕಿವೀಸ್ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 136 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ವಿಂಡೀಸ್ ಸೂಪರ್ 8 ರ ಘಟ್ಟಕ್ಕೆ ಅರ್ಹತೆ ಗಿಟ್ಟಿಸಿಕೊಂಡಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ