ಭಾನುವಾರ ಫೈನಲ್ ನಡೆದರೆ ಟೀಂ ಇಂಡಿಯಾಕ್ಕೆ ಸೋಲು ಗ್ಯಾರಂಟಿ ! ಇಲ್ಲಿದೆ ಅದಕ್ಕೆ ಪುರಾವೆ!

ಕೃಷ್ಣವೇಣಿ ಕೆ

ಸೋಮವಾರ, 19 ಜೂನ್ 2017 (10:55 IST)
ಬೆಂಗಳೂರು: ಭಾನುವಾರಕ್ಕೂ ಟೀಂ ಇಂಡಿಯಾಕ್ಕೂ ಅದೇಕೋ ವಾರ ಸರಿ ಬರೋದಿಲ್ಲ ಅಂತ ಕಾಣುತ್ತದೆ. ಹಾಗಾಗಿಯೇ ಭಾರತ ಭಾನುವಾರ ಐಸಿಸಿ ಟೂರ್ನಿ ಫೈನಲ್ ನಡೆದಾಗ ಗೆದ್ದಿದ್ದು ಒಂದೇ ಬಾರಿ. ಉಳಿದೆಲ್ಲಾ ಬಾರಿ ಸೋತಿದೆ!

 
ಹೌದು. ಇತಿಹಾಸ ಕೆದಕುತ್ತಾ ಹೋದರೆ ಇಂತಹದ್ದೊಂದು ಅಪರೂಪದ ಅಂಕಿ ಅಂಶ ದೊರಕುತ್ತದೆ. ಭಾರತ ಇದುವರೆಗೆ ಎರಡು ಏಕದಿನ ವಿಶ್ವಕಪ್, ಎರಡು ಚಾಂಪಿಯನ್ಸ್ ಟ್ರೋಫಿ ಮತ್ತು ಒಂದು ಟಿ-20 ವಿಶ್ವಕಪ್ ಪಂದ್ಯ ಗೆದ್ದಿದೆ. ಅದರಲ್ಲಿ ಕಳೆದ ಬಾರಿಯ ಚಾಂಪಿಯನ್ಸ್ ಟ್ರೋಫಿ ಪಂದ್ಯ ಬಿಟ್ಟರೆ ಉಳಿದೆಲ್ಲಾ ಫೈನಲ್ ಗಳೂ ನಡೆದದ್ದು, ಭಾನುವಾರದ ಹೊರತಾಗಿ ಬೇರೆ ವಾರಗಳಂದು!

2003 ವಿಶ್ವಕಪ್ ನಲ್ಲಿ ಭಾರತ ಫೈನಲ್ ವರೆಗೆ ತಲುಪಿತ್ತು. ಈ ಪಂದ್ಯ ಮಾರ್ಚ್ 23, 2003 ರಂದು ನಡೆದಿತ್ತು. ಅಂದು ಭಾನುವಾರವಾಗಿತ್ತು. 2000 ರಲ್ಲಿ ಭಾರತ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯಾವಳಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಆಡಿ ಸೋತಿತ್ತು. ಅಂದೂ ಭಾನುವಾರವಾಗಿತ್ತು!

2014 ರಲ್ಲಿ ಶ್ರೀಲಂಕಾ ವಿರುದ್ಧ ಭಾರತ ಟಿ-20 ವಿಶ್ವಕಪ್ ಫೈನಲ್ ಆಡಿ ಸೋತಿತ್ತು. ಅಂದೂ ಮತ್ತದೇ ಭಾನುವಾರದ ಭೂತ ಕಾಡಿತ್ತು. ಈ ಪಂದ್ಯ ನಡೆದಿದ್ದ ಏಪ್ರಿಲ್ 6 ರಂದು ಭಾನುವಾರ.

ಭಾನುವಾರದ ಹೊರತಾಗಿ ಸೋತ ಮೊದಲ ಐಸಿಸಿ ಫೈನಲ್ ಟೂರ್ನಿಯೆಂದರೆ 1997ರ  ಏಷ್ಯಾ ಕಪ್ ಅದೂ ಶ್ರೀಲಂಕಾ ವಿರುದ್ಧ. ಅಂದು ಜುಲೈ 26 ಶನಿವಾರವಾಗಿತ್ತು. ಆದರೆ ನಂತರ ಭಾರತ ಎರಡು ಬಾರಿ ಏಷ್ಯಾಕಪ್ ಫೈನಲ್ ಸೋತಿದ್ದೂ ಭಾನುವಾರವೇ! 2004 ರ ಆಗಸ್ಟ್ 1, ಭಾನುವಾರ ಮತ್ತೊಮ್ಮೆ ಶ್ರೀಲಂಕಾ ವಿರುದ್ಧ ಏಷ್ಯಾ ಕಪ್ ಫೈನಲ್ ನಲ್ಲಿ ಸೋಲು. 2008 ರ ಜುಲೈ 6 ರಂದು ಮಗದೊಮ್ಮೆ ಲಂಕಾ ವಿರುದ್ಧ ಭಾನುವಾರದ ಸೋಲು.

2011 ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಭಾರತ ಗೆಲ್ಲುವಾಗ ಮಾತ್ರ ಭಾನುವಾರವಾಗಿತ್ತು. ಅದು ಬಿಟ್ಟರೆ 1983 ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ವಿಶ್ವಕಪ್ ಗೆದ್ದಿದ್ದು ಶನಿವಾರ. ನಂತರ ಭಾರತಕ್ಕೆ ಸಿಕ್ಕಿದ ಐಸಿಸಿ ಟೂರ್ನಿಯೆಂದರೆ ಏಷ್ಯಾಕಪ್. ಅದು ನಡೆದಿದ್ದು 1984 ರ ಏಪ್ರಿಲ್ 13 ಶುಕ್ರವಾರ.

ಮತ್ತೊಮ್ಮೆ ಲಂಕಾ ವಿರುದ್ಧ ಭಾರತ 1988 ರಲ್ಲಿ ಏಷ್ಯಾಕಪ್ ಗೆದ್ದಿದ್ದು ಶುಕ್ರವಾರ. 1990 ರಲ್ಲಿ ಭಾರತ ಲಂಕಾ ವಿರುದ್ಧ ಏಷ್ಯಾ ಕಪ್ ಗೆದ್ದಿದ್ದು ಗುರವಾರದಂದು. 1995 ಮತ್ತು 2010 ರಲ್ಲೂ ಗುರುವಾರ ಫೈನಲ್ ಪಂದ್ಯ ನಡೆದು ಭಾರತ ಗೆದ್ದಿತ್ತು. ಏಷ್ಯಾ ಕಪ್ ನಲ್ಲೂ ಒಂದೇ ಒಂದು ಅಪವಾದವೆಂಬಂತೆ 2016 ರ ಟೂರ್ನಿಯನ್ನು ಭಾರತ ಭಾನುವಾರ ಗೆದ್ದಿತ್ತು.

2011 ರಲ್ಲಿ ಭಾರತ ಮತ್ತೊಮ್ಮೆ ಏಕದಿನ ವಿಶ್ವಕಪ್ ಗೆದ್ದಿತ್ತು. ಅದು ನಡೆದಿದ್ದು ಏಪ್ರಿಲ್ 2 ಶನಿವಾರ. 2007 ರಲ್ಲಿ ಟಿ-20 ವಿಶ್ವಕಪ್ ಗೆಲುವು ಭಾರತ ದಾಖಲಿಸಿದ್ದು ಸೆಪ್ಟೆಂಬರ್ 24 ಸೋಮವಾರದಂದು. ಅಷ್ಟೇ ಏಕೆ 2002 ರಲ್ಲಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ವಿಜೇತರಾಗಿದ್ದ ಚಾಂಪಿಯನ್ಸ್ ಟ್ರೋಫಿ ಗೆದ್ದಾಗಲೂ ಸೋಮವಾರವಾಗಿತ್ತು!

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ