ಎಡ್ಜ್ ಬಾಸ್ಟನ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 11 ಮಂದಿಯೊಂದಿಗೆ ಕಣಕ್ಕಿಳಿಯಿತಾದರೂ ಆಡಿದ್ದು ಮೂರೇ ಮಂದಿ.
ಬ್ಯಾಟಿಂಗ್ ನಲ್ಲಿ ವಿರಾಟ್ ಕೊಹ್ಲಿ ಹೊರತುಪಡಿಸಿದರೆ ಉಳಿದವರ ಸಾಧನೆ ಸೊನ್ನೆ. ಒಂದು ವೇಳೆ ವಿರಾಟ್ ಕೊಹ್ಲಿ ತಂಡದಲ್ಲಿ ಇರದೇ ಹೋಗಿರುತ್ತಿದ್ದರೆ ಟೀಂ ಇಂಡಿಯಾದ ಮಾನ ಎಷ್ಟು ಕಾಸಿಗೆ ಹರಾಜಾಗುತ್ತಿತ್ತು ನೋಡಿ. ಬೌಲಿಂಗ್ ನಲ್ಲಿ ಕೌಂಟಿ ಕ್ರಿಕೆಟ್ ನಲ್ಲಿ ಪಡೆದುಕೊಂಡಿದ್ದ ಅಷ್ಟೂ ಅನುಭವವನ್ನು ರವಿಚಂದ್ರನ್ ಅಶ್ವಿನ್, ಇಶಾಂತ್ ಶರ್ಮಾ ಧಾರೆಯೆರೆದಿದ್ದರು. ಆದರೆ ಬ್ಯಾಟ್ಸ್ ಮನ್ ಗಳಲ್ಲಿ ಗೆಲುವಿನ ಹಸಿವು ಕಾಣಲೇ ಇಲ್ಲ.
ಟೆಸ್ಟ್ ಪಂದ್ಯದಲ್ಲಿ ಆಡಬೇಕಾದ ತಾಳ್ಮೆ, ತಾಂತ್ರಿಕ ಕೌಶಲ್ಯತೆ ಯಾವುದೇ ಬ್ಯಾಟ್ಸ್ ಮನ್ ನ ಆಟದಲ್ಲಿ ಕಾಣಲಿಲ್ಲ ಎನ್ನುವುದು ವಿಪರ್ಯಾಸ. ಅಜಿಂಕ್ಯಾ ರೆಹಾನೆ, ಮುರಳಿ ವಿಜಯ್, ಕೆಎಲ್ ರಾಹುಲ್ ಈ ಮೂವರೂ ಸ್ಪೆಷಲಿಸ್ಟ್ ಬ್ಯಾಟ್ಸ್ ಮನ್ ಗಳಲ್ಲಿ ಈ ಸಾಮರ್ಥ್ಯವಿದ್ದರೂ ಅವರ ಶಾಟ್ ಸೆಲೆಕ್ಷನ್ ನಲ್ಲಿ ಬೇಜವಾಬ್ಧಾರಿತನ ಎದ್ದು ಕಾಣುತ್ತಿತ್ತು. ಇದೇ ಕಾರಣಕ್ಕೆ ಒಂದು ಅದ್ಭುತವಾಗಿ ಮುಗಿಯಬೇಕಿದ್ದ ಪಂದ್ಯ ಸೋಲಿನ ಕಹಿಯೊಂದಿಗೆ ಕೊನೆಗೊಂಡಿತು. ಬಹುಶಃ ಇಂಗ್ಲೆಂಡ್ ನಲ್ಲಿ ಗೆಲ್ಲಲು ಟೀಂ ಇಂಡಿಯಾಕ್ಕೆ ಇದಕ್ಕಿಂತ ದೊಡ್ಡ ಅವಕಾಶ ಬೇರೊಂದಿರಲಿಲ್ಲ. ಅದನ್ನು ಕೈಯಾರೆ ಹಾಳು ಮಾಡಿಕೊಂಡ ಅಪಕೀರ್ತಿ ಟೀಂ ಇಂಡಿಯಾದ್ದಾಯಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.