ಚಾಂಪಿಯನ್ಸ್ ಟ್ರೋಫಿ ಫೈನಲ್`ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತ ಬಳಿಕ ನಾಯಕ ವಿರಾಟ್ ಕೊಹ್ಲಿ ಹಳ್ಳಕ್ಕೆ ಬಿದ್ದ ಕುರಿಯಂತಾಗಿದ್ದಾರೆ. ಆಳಿಗೊಂದು ಕಲ್ಲು ಎಂಬಂತೆ ಕೊಹ್ಲಿ ಇನ್ನಿಲ್ಲದಂತೆ ಟೀಕೆಗಳ ಸುರಿಮಳೆಗೈಯಲಾಗುತ್ತಿದೆ.
ಕೆಲವು ಟ್ವಿಟ್ಟರಾತಿಗಳು ವಿರಾಟ್ ಕೊಹ್ಲಿಯನ್ನ ಕ್ರಿಕೆಟ್`ನಿಂದಲೇ ನಿಷೇಧಿಸಬೇಕು. ಜೈಲಿಗೆ ಹಾಕಬೇಕು ಎಂದೆಲ್ಲ ಟೀಕಿಸುತ್ತಿದ್ದಾರೆ. ಆದರೆ, ಕ್ರೀಡಾಸ್ಫೂರ್ತಿ ಮೆರೆಯುವ ವಿಶಾಲ ಮನಸ್ಸು ಎಲ್ಲಿಯೂ ಕಾಣುತ್ತಿಲ್ಲ. ಕೊಹ್ಲಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಬಗ್ಗೆ ಟೀಕೆಗಳು ಕೇಳಿಬರುತ್ತಿವೆ. ಆದರೆ, ನೆನಪಿರಲಿ, ವಿರಾಟ್ ಕೊಹ್ಲಿ ಚೇಸಿಂಗ್ ಕಿಂಗ್. ಈ ಹಿಂದೆ ಸಚಿನ್ ತೆಂಡೂಲ್ಕರ್ ಸೇರಿ ಯಾವೊಬ್ಬ ಆಟಗಾರರಿಗೂ ಸಾಧ್ಯವಾಗದಷ್ಟು ಚೇಸಿಂಗ್ ಸೆಂಚುರಿ ಬಾರಿಸಿ ಗಮನ ಸೆಳೆದಿದ್ದಾರೆ. ಹಾಗಾಗಿಯೇ ಅವರು ಆ ನಿರ್ದಾರ ಮಾಡಿದ್ದಾರೆ. ಜೊತೆಗೆ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಚೇಸಿಂಗ್`ನಲ್ಲಿ ಮಾಡಿದ ಕಮಲಾ ಕೊಹ್ಲಿ ನಿರ್ಧಾರಕ್ಕೆ ಕಾರಣವಿರಬಹುದು. ಆದರೆ, ಕೆಲವು ವೇಳೆ ಲೆಕ್ಕಾಚಾರ ಕೈಕೊಡುತ್ತವೆ. ನಿನ್ನೆ ಕೊಹ್ಲಿಗೆ ಆಗಿರುವುದೂ ಅದೇ.
ಟೀಮ್ ಇಂಡಿಯಾ ಸೋತಿದ್ದರಲ್ಲಿ ಇಡೀ ತಂಡದ ಕಳಪೆ ಪ್ರದರ್ಶನವಿದೆ. ಒಂದು ಸೋಲು ಕಂಡ ಮಾತ್ರಕ್ಕೆ ಟೀಮ್ ಇಂಡಿಯಾ ನಾಯಕನನ್ನ ಇನ್ನಿಲ್ಲದಂತೆ ದೂಷಿಸುವುದು ಎಷ್ಟು ಸರಿ. ಹತ್ತಾರು ಗೆಲುವು ತಂದು ಕೊಟ್ಟ ವಿರಾಟ್ ಕೊಹ್ಲಿ ಹೈವೋಲ್ಟೇಜ್ ಪಂದ್ಯದಲ್ಲಿ ಎಡವಿದ್ದಾರೆ. ನಾಯಕನ ಹೊಣೆ ಜೊತೆಗೆ ಬ್ಯಾಟಿಂಗ್ ಫಾರ್ಮ್ ಎರಡನ್ನೂ ಕಾಯ್ದುಕೊಳ್ಳಬೇಕಾದ ಒತ್ತಡ ಕೊಹ್ಲಿಗಿದೆ.
ಭಾರತ ನಿನ್ನೆಯ ಫೈನಲ್`ನಲ್ಲಿ ಸೋತಿರಬಹುದು. ಆದರೆ, 2007 ಟಿ-20 ಫೈನಲ್`ನಲ್ಲಿ ಪಾಕಿಸ್ತಾನದ ವಿರುದ್ಧ ರೋಚಕವಾಗಿ ಗೆದ್ದದ್ದನ್ನ ಮರೆಯಬಾರದು. ಅಷ್ಟೇ ಅಲ್ಲ, ಐಸಿಸಿ ಸರಣಿಗಳಲ್ಲಿ ಭಾರತವೇ ಅತಿ ಹೆಚ್ಚು ಪಂದ್ಯಗಳನ್ನ ಗೆದ್ದಿದೆ. ಇಲ್ಲಿ ಸೋತಿರುವ ಭಾರತ ತಂಡ ಮುಂಬರುವ ವಿಶ್ವಕಪ್ ಪಂದ್ಯದಲ್ಲಿ ತಿರುಗಿಬೀಳುವುದರಲ್ಲಿ ಅನುಮಾನವೇ ಇಲ್ಲ.