ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯಾಗಿದ್ದು, ಟೀಂ ಇಂಡಿಯಾ ಕ್ರಿಕೆಟಿಗರಿಗೆ ನೀಡುವ ವೇತನ ವಿವರ ಇಲ್ಲಿದೆ.
ಇತ್ತೀಚೆಗೆ ಟೀಂ ಇಂಡಿಯಾ ಯುವ ಕ್ರಿಕೆಟಿಗರು ಟೆಸ್ಟ್ ಕ್ರಿಕೆಟ್ ಆಡಲು ನಿರಾಸಕ್ತಿ ತೋರುತ್ತಿರುವ ಕಾರಣಕ್ಕೆ ಬಿಸಿಸಿಐ ತನ್ನ ಆಟಗಾರರಿಗೆ ನೀಡುವ ಸಂಭಾವನೆ, ವೇತನ ಭತ್ಯೆ ಹೆಚ್ಚಳ ಮಾಡಲು ಚಿಂತನೆ ನಡೆಸಿದೆ. ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಇತ್ತೀಚೆಗೆ ಕುಂಟು ನೆಪ ಹೇಳಿ ಟೀಂ ಇಂಡಿಯಾದಿಂದ ಹೊರಗುಳಿದ ಬಳಿಕ ಬಿಸಿಸಿಐ ವೇತನ ಪರಿಷ್ಕರಣೆಗೆ ಮುಂದಾಗಿದೆ.
ಇತ್ತೀಚೆಗೆ ಯುವ ಕ್ರಿಕೆಟಿಗರೂ ಐಪಿಎಲ್ ಮೂಲಕ ಕೋಟ್ಯಾಂತರ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಹೀಗಿರುವಾಗ ರಾಷ್ಟ್ರೀಯ ತಂಡಕ್ಕಾಗಿ ಆಡುವ ಉತ್ಸಾಹ ಯುವ ಕ್ರಿಕೆಟಿಗರಲ್ಲಿ ಕಾಣುತ್ತಿಲ್ಲ. ಅದರಲ್ಲೂ ಟೆಸ್ಟ್ ಮಾದರಿ ಎಂದರೆ ಒಂದು ರೀತಿಯ ಅನಾದರಣೆ ಶುರುವಾಗಿದೆ. ಇದೇ ಕಾರಣಕ್ಕೆ ಆಟಗಾರರನ್ನು ಆಕರ್ಷಿಸಲು ವೇತನ ಹೆಚ್ಚಳಕ್ಕೆ ಮುಂದಾಗಿದೆ.
ಸದ್ಯಕ್ಕೆ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಗುತ್ತಿಗೆ ಆಧಾರದಲ್ಲಿ ವೇತನ ನೀಡಲಾಗುತ್ತಿದೆ. ಅದರಂತೆ ಎಲ್ಲಾ ಮಾದರಿಯಲ್ಲಿ ಆಡುವ ಸ್ಟಾರ್ ಆಟಗಾರರು ಎ ಪ್ಲಸ್ ದರ್ಜೆಯ ಗುತ್ತಿಗೆ ಹೊಂದಿದ್ದಾರೆ. ಅವರಿಗೆ ವಾರ್ಷಿಕ 7 ಕೋಟಿ ರೂ. ವೇತನ ನೀಡಲಾಗುತ್ತಿದೆ. ಇನ್ನು, ಎ ದರ್ಜೆಯ ಆಟಗಾರರಿಗೆ ವಾರ್ಷಿಕ 5 ಕೋಟಿ, ಬಿ ದರ್ಜೆಯ ಗುತ್ತಿಗೆ ಪಡೆದಿರುವ ಆಟಗಾರರಿಗೆ ವಾರ್ಷಿಕ 3 ಕೋಟಿ ರೂ. ಮತ್ತು ಸಿ ದರ್ಜೆಯ ಗುತ್ತಿಗೆ ಪಡೆದ ಆಟಗಾರರಿಗೆ ವಾರ್ಷಿಕ 1 ಕೋಟಿ ರೂ. ವೇತನ ನೀಡಲಾಗುತ್ತಿದೆ. ಇದೀಗ ಹೆಚ್ಚಳವಾಗುವ ಸಾಧ‍್ಯತೆಯಿದೆ.