ನಾಲ್ಕನೇ ಬಾರಿಗೆ ಏಕದಿನ ವಿಶ್ವಕಪ್ ಫೈನಲ್ ಗೆ ಟೀಂ ಇಂಡಿಯಾ
ಭಾರತ ನೀಡಿದ 398 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ನ್ಯೂಜಿಲೆಂಡ್ 327 ರನ್ ಗಳಿಸಲಷ್ಟೇ ಶಕ್ತವಾಯಿತು. ಒಂದು ಹಂತದಲ್ಲಿ ಡೆರಿಲ್ ಮಿಚೆಲ್, ಕೇನ್ ವಿಲಿಯಮ್ಸನ್ ಜೋಡಿ ಅತ್ಯುತ್ತಮ ಆಟದ ಮೂಲಕ ಭಾರತಕ್ಕೆ ಭೀತಿ ಹುಟ್ಟಿಸಿದ್ದರೂ ಮೊಹಮ್ಮದ್ ಶಮಿ ಮತ್ತೊಮ್ಮೆ ಮ್ಯಾಜಿಕ್ ಮಾಡಿದರು. ಕೇನ್ ವಿಲಿಯಮ್ಸನ್ ಮತ್ತು ಟಾಮ್ ಲಥಮ್ ವಿಕೆಟ್ ಎರಡೇ ಎಸೆತದಲ್ಲಿ ಪಡೆಯುವ ಮೂಲಕ ಪಂದ್ಯಕ್ಕೆ ತಿರುವು ನೀಡಿದರು. ಶಮಿ ಈ ವಿಶ್ವಕಪ್ ನಲ್ಲಿ ಮೂರನೇ ಬಾರಿಗೆ 5 ವಿಕೆಟ್ ಕಬಳಿಸಿದರು. ಹಾಗಿದ್ದರೂ ಡೆರಿಲ್ ಮಿಚೆಲ್ 134 ರನ್ ಗಳಿಸಿದರು. ಆದರೆ ಭಾರತದ ಬೃಹತ್ ಮೊತ್ತ ಮತ್ತು ಕೊನೆಯ ಓವರ್ ಗಳಲ್ಲಿ ಶಿಸ್ತಿನ ಬೌಲಿಂಗ್ ಮತ್ತು ಫೀಲ್ಡಿಂಗ್ ನಿಂದಾಗಿ ಕಿವೀಸ್ ಗೆ ಗುರಿ ತಲುಪಲಾಗಲಿಲ್ಲ. ಈ ಮೂಲಕ ಭಾರತ ನಾಲ್ಕನೇ ಬಾರಿಗೆ ಫೈನಲ್ ಗೆ ಲಗ್ಗೆಯಿಟ್ಟಿತು.