ಏಷ್ಯಾ ಕಪ್‌ ಕಿರೀಟ ಗೆದ್ದ ಬೆನ್ನಲ್ಲೇ ವಿಂಡೀಸ್‌ ಮೇಲೆ ಸವಾರಿ ಮಾಡುವತ್ತ ಟೀಂ ಇಂಡಿಯಾ

Sampriya

ಗುರುವಾರ, 2 ಅಕ್ಟೋಬರ್ 2025 (10:12 IST)
Photo Credit X
ಅಹಮದಾಬಾದ್: ಏಷ್ಯಾ ಕಪ್‌ ಟೂರ್ನಿಯಲ್ಲಿ ಕಿರೀಟವನ್ನು ಮುಡಿಗೇರಿಸಿಕೊಂಡ ಟೀಂ ಇಂಡಿಯಾ ಮತ್ತೆ ಟೆಸ್ಟ್‌ ಕ್ರಿಕೆಟ್‌ನತ್ತ ಹೊರಳಿದೆ. ವೆಸ್ಟ್‌ ಇಂಡೀಸ್‌ ವಿರುದ್ಧ ಎರಡು ಟೆಸ್ಟ್‌ ಪಂದ್ಯಗಳ ಸರಣಿ ಇಂದಿನಿಂದ ಆರಂಭವಾಗಲಿದೆ.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆತಿಥೇಯ ಭಾರತ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ವೆಸ್ಟ್ ಇಂಡೀಸ್ ತಂಡದ ನಾಯಕ ರೋಸ್ಟನ್ ಚೇಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. 

ಇಂಗ್ಲೆಂಡ್ ಪ್ರವಾಸದಲ್ಲಿ ಅಮೋಘ ಪ್ರದರ್ಶನದ ಬಳಿಕ ತವರಿನಲ್ಲಿ ವಿಂಡೀಸ್ ಸವಾಲು ಭಾರತಕ್ಕೆ ಎದುರಾಗಿದೆ. ಈಗಾಗಲೇ ನಾಯಕತ್ವ ಜೊತೆಗೆ ಬ್ಯಾಟಿಂಗ್‌ನಲ್ಲೂ ಸೈ ಎನಿಸಿರುವ ಶುಭಮನ್ ಗಿಲ್, ವಿಂಡೀಸ್ ವಿರುದ್ಧದ ಸರಣಿಯಲ್ಲಿ ಗೆಲುವಿನ ಆತ್ಮವಿಶ್ವಾಸದಲ್ಲಿದ್ದಾರೆ.

ಯಶಸ್ವಿ ಜೈಸ್ವಾಲ್ ಹಾಗೂ ಕೆ.ಎಲ್. ರಾಹುಲ್ ಇನಿಂಗ್ಸ್ ಆರಂಭಿಸಲಿದ್ದಾರೆ. ನಾಯಕ ಗಿಲ್ ಜೊತೆಗೆ ಸಾಯಿ ಸುದರ್ಶನ್, ಧ್ರುವ್ ಜುರೇಲ್ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ. ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್ ಹಾಗೂ ನಿತೀಶ್ ರೆಡ್ಡಿ ತಂಡದಲ್ಲಿರುವ ಆಲ್‌ರೌಂಡರ್ ಆಟಗಾರರಾಗಿದ್ದಾರೆ.

ಜಸ್‌ಪ್ರೀತ್ ಬೂಮ್ರಾ ಹಾಗೂ ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಏಷ್ಯಾ ಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಕುಲದೀಪ್ ಯಾದವ್ ಸಹ ತಂಡದಲ್ಲಿದ್ದಾರೆ. ವಿಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯವು ಅಕ್ಟೋಬರ್ 10ರಿಂದ ದೆಹಲಿಯಲ್ಲಿ ನಡೆಯಲಿದೆ.

2002ರಿಂದ ವಿಂಡೀಸ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ಅಜೇಯ ಓಟವನ್ನು ಮುಂದುವರಿಸಿದೆ. ಈ ಅವಧಿಯಲ್ಲಿ 25 ಟೆಸ್ಟ್ ಪಂದ್ಯಗಳಲ್ಲಿ ಜಯ ಗಳಿಸಿದೆ. ಪ್ರಸ್ತುತ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲೂ ಜಯದ ಓಟ ಮುಂದುವರಿಸುವ ಛಲದಲ್ಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ