ಬ್ರಿಸ್ಬೇನ್: ಭಾರತದ 14 ವರ್ಷದ ಪೋರ ವೈಭವ್ ಸೂರ್ಯವಂಶಿ ಸಿಡಿಲಬ್ಬರ ಮುಂದುವರೆದಿದೆ. ಆಸ್ಟ್ರೇಲಿಯಾ ನೆಲದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಮಿಂಚಿನ ಶತಕ ಬಾರಿಸಿದ್ದಾರೆ.
ವೈಭವ್ ಸೂರ್ಯವಂಶಿ ಐಪಿಎಲ್ನಲ್ಲಿ ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ನಿರ್ಮಿಸಿದ್ದರು. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ 11 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 101 ರನ್ ಬಾರಿಸಿದ್ದರು.
ಇದೀಗ ಯೂತ್ ಟೆಸ್ಟ್‌ನಲ್ಲಿ ಮಿಂಚು ಹರಿಸಿದ್ದಾರೆ. ಭಾರತ ಅಂಡರ್-19 ಮತ್ತು ಆಸ್ಟ್ರೇಲಿಯಾ ಅಂಡರ್-19 ತಂಡಗಳ ನಡುವೆ ಯೂತ್ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿರುವ ಸೂರ್ಯವಂಶಿ ಸಿಡಿಲಬ್ಬರದ ಶತಕ ಸಿಡಿಸಿದ್ದಾರೆ.
ಬ್ರಿಸ್ಬೇನ್ನ ಹಿಯಾನ್ ಹೀಲಿ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್ನಲ್ಲಿ 243 ರನ್ಗಳಿಸಿ ಆಲೌಟ್ ಆಯಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಶುರು ಮಾಡಿದ ಭಾರತ ಅಂಡರ್ 19 ತಂಡಕ್ಕೆ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಆರಂಭ ಒದಗಿಸಿದ್ದರು.
86 ಎಸೆತಗಳನ್ನು ಎದುರಿಸಿದ ವೈಭವ್ ಸೂರ್ಯವಂಶಿ 8 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 113 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ವೈಭವ್ ಅವರ ಈ ವೈಭೋವಪೇತ ಇನಿಂಗ್ಸ್ನಿಂದಾಗಿ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ 300+ ರನ್ಗಳಿಸಿ ಬ್ಯಾಟಿಂಗ್ ಮುಂದುವರೆಸಿದೆ.