ಭಾರತ-ವಿಂಡೀಸ್ ಟಿ20: ಬ್ಯಾಟಿಂಗ್ ವೈಫಲ್ಯಕ್ಕೆ ಬೆಲೆ ತೆತ್ತ ಟೀಂ ಇಂಡಿಯಾ
ಮಂಗಳವಾರ, 2 ಆಗಸ್ಟ್ 2022 (08:01 IST)
ಸೈಂಟ್ ಕಿಟ್ಸ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ದ್ವಿತೀಯ ಏಕದಿನ ಪಂದ್ಯವನ್ನು ವಿಂಡೀಸ್ 5 ವಿಕೆಟ್ ಗಳಿಂದ ಗೆದ್ದುಕೊಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 19.4 ಓವರ್ ಗಳಲ್ಲಿ ಜುಜುಬಿ 138 ರನ್ ಗಳಿಗೆ ಆಲೌಟ್ ಆಯಿತು. ನಾಯಕ ರೋಹಿತ್ ಶರ್ಮಾ ಬಂದ ಬಾಲ್ ಗೇ ಔಟಾಗಿ ಪೆವಿಲಿಯನ್ ಸೇರಿಕೊಂಡರು. ಅಲ್ಲಿಂದಲೇ ಟೀಂ ಇಂಡಿಯಾ ಕುಸಿತ ಆರಂಭವಾಯಿತು. ಸೂರ್ಯಕುಮಾರ್ ಯಾದವ್ 11, ಶ್ರೇಯಸ್ ಅಯ್ಯರ್ 10, ರಿಷಬ್ ಪಂತ್ 24, ದಿನೇಶ್ ಕಾರ್ತಿಕ್ ಕೇವಲ 7 ರನ್ ಗೆ ವಿಕೆಟ್ ಒಪ್ಪಿಸಿದರು. ಇದ್ದವರಲ್ಲಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಉತ್ತಮ ಬ್ಯಾಟಿಂಗ್ ಮಾಡಿದರು. ಪಾಂಡ್ಯ 31, ಜಡೇಜಾ 27 ರನ್ ಗಳಿಸಿದರು. ಆದರೆ ಇದು ಏತಕ್ಕೂ ಸಾಲಲಿಲ್ಲ. ವಿಂಡೀಸ್ ಪರ ಮಾರಕ ದಾಳಿ ಸಂಘಟಿಸಿದ ಒಬೆಡ್ ಮೆಕೊಯ್ 6 ವಿಕೆಟ್ ತಮ್ಮದಾಗಿಸಿಕೊಂಡರು.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ವಿಂಡೀಸ್ ಗೆ ಆರಂಭಿಕ ಬ್ರೆಂಡನ್ ಕಿಂಗ್ 68 ರನ್, ಡೆವನ್ ಥಾಮಸ್ 31 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ವಿಂಡೀಸ್ ಅಂತಿಮವಾಗಿ 19.2 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 141 ರನ್ ಗಳಿಸಿ ಗೆಲುವು ಕಂಡಿತು. ಇದರೊಂದಿಗೆ ಸರಣಿ 1-1 ರಿಂದ ಸಮಬಲಗೊಂಡಿತು.