ಅಗ್ರ ಕ್ರಮಾಂಕದ ವೈಫಲ್ಯ, ಹಾರ್ದಿಕ್ ಮಾಡಿದ ತಪ್ಪು ಟೀಂ ಇಂಡಿಯಾ ಸೋಲಿಗೆ ಕಾರಣ

ಶುಕ್ರವಾರ, 6 ಜನವರಿ 2023 (08:50 IST)
Photo Courtesy: Twitter
ಪುಣೆ: ಭಾರತ ಮತ್ತು ಶ್ರೀಲಂಕಾ ನಡುವಿನ ದ್ವಿತೀಯ ಟಿ20 ಪಂದ್ಯವನ್ನು ಟೀಂ ಇಂಡಿಯಾ 16 ರನ್ ಗಳಿಂದ ಸೋತಿದೆ. ಈ ಸೋಲಿಗೆ ಪ್ರಮುಖವಾಗಿ ಎರಡು ಕಾರಣಗಳಿವೆ.

ಪುಣೆ ಮೈದಾನದಲ್ಲಿ ಟಾಸ್ ಗೆದ್ದ ನಾಯಕ ಹಾರ್ದಿಕ್ ಪಾಂಡ್ಯ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಆದರೆ ಪುಣೆಯಲ್ಲಿ ಇದುವರೆಗಿನ ದಾಖಲೆಗಳನ್ನು ನೋಡುವುದಾದರೆ ಮೊದಲು ಬ್ಯಾಟಿಂಗ್ ಮಾಡಿದ ತಂಡವೇ ಮೇಲುಗೈ ಸಾಧಿಸಿದೆ. ಇದರ ಬಗ್ಗೆ ನನಗೆ ಗೊತ್ತಿರಲಿಲ್ಲ ಎಂದು ವೀಕ್ಷಕ ವಿವರಣೆಕಾರರ ಬಳಿ ಹಾರ್ದಿಕ್ ಹೇಳಿಕೊಂಡಿದ್ದರು.

ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ದಸುನ್ ಶಣಕ, ಕುಸಾಲ್ ಮೆಂಡಿಸ್ ಭರ್ಜರಿ ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತು. ಶಣಕ 22 ಎಸೆತಗಳಲ್ಲಿ 56, ಮೆಂಡಿಸ್ 31 ಎಸೆತಗಳಲ್ಲಿ 52 ರನ್ ಗಳಿಸಿದರು. ಭಾರತದ ಪರ ಉಮ್ರಾನ್ ಮಲಿಕ್ 3, ಅಕ್ಸರ್ ಪಟೇಲ್ 2, ಯಜುವೇಂದ್ರ ಚಾಹಲ್ 1 ವಿಕೆಟ್ ಕಬಳಿಸಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತದ ಅಗ್ರ ಕ್ರಮಾಂಕ ಕೈಕೊಟ್ಟಿತು. ಅಗ್ರ ಕ್ರಮಾಂಕದ ವೈಫಲ್ಯವೇ ಈ ಸೋಲಿಗೆ ಮತ್ತೊಂದು ಕಾರಣವಾಯಿತು. ಇಶಾನ್ ಕಿಶನ್‍ 2, ಶುಬ್ನಂ ಗಿಲ್ 5, ರಾಹುಲ್ ತ್ರಿಪಾಠಿ 5 ರನ್ ಗಳಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಕೇವಲ 12, ದೀಪಕ್ ಹೂಡಾ 9 ರನ್ ಗೆ ತೃಪ್ತಿಪಟ್ಟುಕೊಂಡರು. ಒಂದು ಹಂತದಲ್ಲಿ ಹೀನಾಯವಾಗಿ ಸೋಲುವ ಹಂತದಲ್ಲಿದ್ದಾಗ ತಂಡಕ್ಕೆ ಆಸರೆಯಾಗಿದ್ದು ಸೂರ್ಯಕುಮಾರ್ ಯಾದವ್, ಅಕ್ಸರ್ ಪಟೇಲ್ ಸ್ಪೋಟಕ ಬ್ಯಾಟಿಂಗ್. ಸೂರ್ಯ 36 ಎಸೆತಗಳಲ್ಲಿ 51 ರನ್ ಗಳಿಸಿದರೆ ಅಕ್ಸರ್ ಪಟೇಲ್ 31 ಎಸೆತಗಳಲ್ಲಿ 65 ರನ್ ಗಳಿಸಿದರು. ಆದರೆ ಅಂತಿಮವಾಗಿ ಇಬ್ಬರೂ ಔಟಾಗಿದ್ದರಿಂದ ಭಾರತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ನಡುವೆ ಶಿವಂ ಮಾವಿ 26 ರನ್ ಗಳ ಕೊಡುಗೆ ಮರೆಯುವಂತಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ