ದುಬೈ: ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿದೆ.
ಟೀಂ ಇಂಡಿಯಾ ಬ್ಯಾಟಿಂಗ್ ನದ್ದು ಮತ್ತದೇ ರಾಗ, ಅದೇ ಹಾಡು ಎನ್ನುವಂತಿತ್ತು. ಕಳೆದ ಪಂದ್ಯದಲ್ಲಿ ಕೊಹ್ಲಿ ಏಕಾಂಗಿ ಶೋ ನಡೆಸಿದ್ದರು. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಏಕಾಂಗಿ ಹೋರಾಟ ನಡೆಸಿದರು. ರೋಹಿತ್ 41 ಎಸೆತಗಳಿಂದ 4 ಸಿಕ್ಸರ್ ಸಹಿತ 71 ರನ್ ಚಚ್ಚಿ ಔಟಾದರು. ಅವರು ಕ್ರೀಸ್ ನಲ್ಲಿರುವವರೆಗೂ ಭಾರತದ ಬ್ಯಾಟಿಂಗ್ ಸರಿಯಾದ ಹಾದಿಯಲ್ಲಿತ್ತು.
ಆದರೆ ಅವರು ಔಟಾಗುತ್ತಿದ್ದಂತೇ 34 ರನ್ ಗಳಿಸಿದ ಸೂರ್ಯಕುಮಾರ್ ಯಾದವ್ ಔಟಾದರು. ಬಳಿಕ 17 ರನ್ ಗಳಿಸಿದ ಹಾರ್ದಿಕ್ ಪಾಂಡ್ಯ ದೊಡ್ಡ ಹೊಡೆತಕ್ಕೆ ಕೈ ಹಾಕಲು ಹೋಗಿ ವಿಕೆಟ್ ಒಪ್ಪಿಸಿದರು. ದೀಪಕ್ ಹೂಡಾ ಗಳಿಕೆ ಕೇವಲ 3 ರನ್. 10 ನೇ ಓವರ್ ಬಳಿಕ ಮತ್ತೆ ರನ್ ಗಳಿಸಲು ಪರದಾಡಿದ ಭಾರತ ನಿರೀಕ್ಷಿಸಿದಷ್ಟು ರನ್ ಗಳಿಸಲಾಗದೇ ಪರದಾಡಿತು. ಮತ್ತೆ ವಿಫಲರಾದ ಆರಂಭಿಕ ಕೆಎಲ್ ರಾಹುಲ್ 6 ರನ್ ಗೆ ವಿಕೆಟ್ ಒಪ್ಪಿಸಿದರೆ ವಿರಾಟ್ ಕೊಹ್ಲಿ ಶೂನ್ಯ ಸುತ್ತಿದರು. ಕೊನೆಯ ಓವರ್ ಗಳಲ್ಲಿ ರಿಷಬ್ ಪಂತ್ ರನ್ ಗತಿ ಹೆಚ್ಚಿಸಬಹುದು ಎಂಬ ವಿಶ್ವಾಸವಿತ್ತು. ಆದರೆ ಅವರು 17 ರನ್ ಗೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಭಾರತದ ರನ್ ಗತಿ ಹೆಚ್ಚಿಸುವ ಕನಸು ಭಗ್ನಗೊಂಡಿತು.