ಲಿಯಾನ್ ಬಲೆಯೊಳಗೆ ಬಿದ್ದ ಟೀಂ ಇಂಡಿಯಾ

ಕೃಷ್ಣವೇಣಿ ಕೆ

ಶನಿವಾರ, 4 ಮಾರ್ಚ್ 2017 (16:30 IST)
ಬೆಂಗಳೂರು: ಮೊದಲ ಟೆಸ್ಟ್ ನಲ್ಲಿ ಏನೋ ತಪ್ಪುಗಳಾಯ್ತು. ಮತ್ತೊಮ್ಮೆ ಅಂತಹ ತಪ್ಪು ಮಾಡುವುದಿಲ್ಲ. ಚೆನ್ನಾಗಿಯೇ ಆಡಿ ತೋರಿಸುತ್ತಾರೆ ಎಂದು ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಭಾರತ ತಂಡ ಮತ್ತೊಮ್ಮೆ ಎಡವಿತು.


ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ನಲ್ಲಿ 105 ರನ್ ಗಳಿಗೆ ಎರಡೂ ಇನಿಂಗ್ಸ್ ಗಳಲ್ಲಿ ಆಲೌಟ್ ಆಗಿತ್ತು. ದ್ವಿತೀಯ ಟೆಸ್ಟ್ ನಲ್ಲೂ ಹೇಳಿಕೊಂಡಂತೆ ಸುಧಾರಿತ ಪ್ರದರ್ಶನವೇನೂ ಕಾಣಲಿಲ್ಲ. ನಾಥಮ್ ಲಿಯೋನ್ ದಾಳಿಗೆ ತತ್ತರಿಸಿ ಕೇವಲ 189 ರನ್ ಗಳಿಗೆ ಮೊದಲ ಇನಿಂಗ್ಸ್ ಸಮಾಪ್ತಿಯಾಯಿತು. ಲಯೋನ್ ಅವರು 8 ವಿಕೆಟ್ ಕಿತ್ತರು. ಇದು ಟೀಂ ಇಂಡಿಯಾದ ಸಾಮರ್ಥ್ಯಕ್ಕೆ ತಕ್ಕ ಆಟವಲ್ಲ.

ಭಾರತ ಯಾವುದರಲ್ಲಿ ಸಮರ್ಥ ಎಂದು ಬೀಗುತ್ತಿತ್ತೋ ಅದೇ ಸ್ಪಿನ್ ಅಸ್ತ್ರ ಬಳಸಿ ಈ ಪಂದ್ಯದಲ್ಲೂ ಪ್ರವಾಸಿಗರು ಕಟ್ಟಿ ಹಾಕಿದರು. ಹಾಗೆ ನೋಡಿದರೆ ಈ ಪಂದ್ಯದಲ್ಲಿ ಕಳೆದ ಪಂದ್ಯದಷ್ಟು ಬಾಲ್ ಅಪಾಯಕಾರಿಯಾಗಿ ಬರುತ್ತಿರಲಿಲ್ಲ. ಭಾರತೀಯ ಬ್ಯಾಟ್ಸ್ ಮನ್ ಗಳು ತಾವಾಗೇ ವಿಕೆಟ್ ಅರ್ಪಿಸುತ್ತಿದ್ದರಷ್ಟೇ.

ಇದಕ್ಕೆ ಉತ್ತಮ ಉದಾಹರಣೆ ವಿರಾಟ್ ಕೊಹ್ಲಿ ವಿಕೆಟ್. ಸುಖಾ ಸುಮ್ಮನೇ ಚೆಂಡು ಬಿಡಲು ಹೋಗಿ ಎಲ್ ಬಿಡಬ್ಲ್ಯು ಬಲೆಗೆ ಬಿದ್ದರು. ಪಿಚ್ ಬೌಲರ್ ಗಳಿಗೆ ಸಹಕರಿಸುತ್ತಿತ್ತು ಎನ್ನುವುದೇನೋ ನಿಜ. ಆದರೆ ಎಚ್ಚರಿಕೆಯಿಂದ ಆಡಿದ್ದರೆ, ಭಾರತ ಉತ್ತಮ ಮೊತ್ತ ಕಲೆ ಹಾಕುತ್ತಿತ್ತು. ಕರುಣ್ ನಾಯರ್, ಅಜಿಂಕ್ಯಾ ರೆಹಾನೆ ಮುನ್ನುಗ್ಗಿ ಬಾರಿಸುವ ಧಾವಂತದಲ್ಲಿ ಔಟಾದರು.

ಎದುರಾಳಿ ತಂಡ ಇಷ್ಟು ಕಡಿಮೆ  ಮೊತ್ತಕ್ಕೆ ಪತನವಾದರೆ ಎರಾಳಿಗಳ ಆತ್ಮವಿಶ್ವಾಸ ಹೆಚ್ಚುವುದು ಸಹಜ. ಸಾಲದೆಂಬಂತೆ ಭಾರತ ಒಂದು ಕ್ಯಾಚ್ ಕೈಚೆಲ್ಲಿತು. ದಿನದಂತ್ಯಕ್ಕೆ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೇ 40 ರನ್ ಗಳಿಸಿತ್ತು. ಭಾರತದ ಮೊದಲ ಇನಿಂಗ್ಸ್ ಮೊತ್ತ ದಾಟಲು ಇನ್ನು 149 ರನ್ ಗಳಿಸಿದರೆ ಸಾಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ