ಬಾರ್ಡರ್-ಗವಾಸ್ಕರ್ ಟೆಸ್ಟ್: ತಾನೇ ತೋಡಿದ ಹಳ್ಳಕ್ಕೆ ತಾನೇ ಬಿದ್ದ ಟೀಂ ಇಂಡಿಯಾ?!
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಕೇವಲ 109 ರನ್ ಗಳಿಗೆ ಆಲೌಟ್ ಆಯಿತು. ಎಲ್ಲಾ 10 ವಿಕೆಟ್ ಗಳೂ ಆಸ್ಟ್ರೇಲಿಯಾದ ಸ್ಪಿನ್ನರ್ ಗಳ ಪಾಲಾಯಿತು. ಆಸೀಸ್ ಸ್ಪಿನ್ನರ್ ಗಳ ಎಸೆತಕ್ಕೆ ದಿಕ್ಕು ತೋಚದಂತಾದ ಟೀಂ ಇಂಡಿಯಾ ಬ್ಯಾಟಿಗರು ರನ್ ಗಳಿಸುವುದು ಬಿಡಿ, ಕ್ರೀಸ್ ನಲ್ಲಿ ಕೆಲ ಹೊತ್ತು ನಿಂತು ಹೋರಾಡುವ ಛಾತಿಯನ್ನೂ ತೋರಲಿಲ್ಲ.
ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಆಸ್ಟ್ರೇಲಿಯಾ ಮೊದಲ ದಿನದಂತ್ಯಕ್ಕೆ 4 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದ್ದು, ಬೃಹತ್ ಮುನ್ನಡೆಯತ್ತ ದಾಪುಗಾಲಿಟ್ಟಿದೆ. ವಿಶೇಷವೆಂದರೆ ಈ ನಾಲ್ಕೂ ವಿಕೆಟ್ ಗಳನ್ನೂ ರವೀಂದ್ರ ಜಡೇಜಾ ಒಬ್ಬರೇ ಕೆಡವಿದರು. ಆಸೀಸ್ ಪರ ಆರಂಭಿಕ ಉಸ್ಮಾನ್ ಖವಾಜ 60 ರನ್ ಗಳಿಸಿ ಔಟಾದರೆ ಲಬುಶೇಜ್ 31, ಸ್ಟೀವ್ ಸ್ಮಿತ್ 26 ರನ್ ಗಳಿಸಿದರು. ಇದೀಗ ಆಸೀಸ್ 47 ರನ್ ಗಳ ಮುನ್ನಡೆ ಸಾಧಿಸಿದೆ.