ವಿಶ್ವಕಪ್ 2019: ನಾಲ್ಕನೇ ಬಾರಿಗೆ ವಿಶ್ವಕಪ್ ಫೈನಲ್ ಗೇರುವುದೇ ಟೀಂ ಇಂಡಿಯಾ?
ಮಂಗಳವಾರ, 9 ಜುಲೈ 2019 (09:10 IST)
ಲಂಡನ್: ವಿಶ್ವಕಪ್ 2019 ರ ಮೊದಲ ಸೆಮಿಫೈನಲ್ ಇಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯಲಿದ್ದು, ಮೊದಲನೆಯದಾಗಿ ಫೈನಲ್ ತಲುಪುವವರು ಯಾರು ಎಂದು ನಿರ್ಧಾರವಾಗಲಿದೆ.
ಅಂಡರ್ 19 ವಿಶ್ವಕಪ್ ಬಳಿಕ ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ ಮತ್ತು ಭಾರತ ವಿಶ್ವಕಪ್ ಸೆಮಿಫೈನಲ್ ನಲ್ಲಿ ಎದುರು ಬದುರಾಗುತ್ತಿವೆ. ಈ ವಿಶ್ವಕಪ್ ನಲ್ಲಿಯೂ ಒಮ್ಮೆಯೂ ಈ ತಂಡಗಳಿಗೆ ಎದುರಾಗುವ ಅವಕಾಶ ಸಿಕ್ಕಿಲ್ಲ. ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಕಿವೀಸ್ ಎದುರು ಸೋತಿತ್ತು.
ಆದರೆ ಈ ವಿಶ್ವಕಪ್ ಕೂಟದಲ್ಲಿ ಎರಡೂ ತಂಡಗಳು ಬಲಾಡ್ಯರಾಗಿಯೇ ಇರುವುದರಿಂದ ಈ ಸೆಮಿಫೈನಲ್ ನಲ್ಲಿ ಗೆಲ್ಲುವವರು ಯಾರು ಎಂಬ ಕುತೂಹಲ ಮೂಡಿದೆ. ಅತ್ತ ನ್ಯೂಜಿಲೆಂಡ್ ಬಳಿ ಅತ್ಯುತ್ತಮ ಬೌಲರ್ ಗಳ ಅಸ್ತ್ರವಿದ್ದರೆ ಇತ್ತ ಭಾರತಕ್ಕೆ ಬ್ಯಾಟಿಂಗ್ ಶಕ್ತಿಯಿದೆ.
ಈ ಸೆಮಿಫೈನಲ್ ಗೆದ್ದರೆ ಟೀಂ ಇಂಡಿಯಾ ವಿಶ್ವಕಪ್ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಫೈನಲ್ ಗೆ ಲಗ್ಗೆಯಿಟ್ಟಂತಾಗುತ್ತದೆ. ಇದಕ್ಕೂ ಮೊದಲು ಮೂರು ಬಾರಿ ಫೈನಲ್ ತಲುಪಿ, ಎರಡು ಬಾರಿ ಚಾಂಪಿಯನ್ ಆದ ಹೆಗ್ಗಳಿಕೆ ಭಾರತದ್ದು. ಈ ಬಾರಿ ಮತ್ತೆ ಅದೇ ಸಾಧನೆ ಮಾಡಲಿ ಎಂಬುದೇ ಅಭಿಮಾನಿಗಳ ಹಾರೈಕೆ.