ಬೌಲರ್ ಗಳ ಟ್ವಿಸ್ಟ್ ನಿಂದ ಗೆದ್ದ ಟೀಂ ಇಂಡಿಯಾ

ಬುಧವಾರ, 24 ಮಾರ್ಚ್ 2021 (09:09 IST)
ಪುಣೆ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಅಚ್ಚರಿಯ ರೀತಿಯಲ್ಲಿ 66 ರನ್ ಗಳ ಗೆಲುವು ದಾಖಲಿಸಿದೆ.


ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 317 ರನ್ ಗಳಿಸಿತು. ಆರಂಭದಲ್ಲಿ ರೋಹಿತ್ ಶರ್ಮಾ-ಶಿಖರ್ ಧವನ್ ಜೋಡಿ ನಿಧಾನಗತಿಯ ಆಟವಾಡಿದರೂ 15 ಓವರ್ ನಿಭಾಯಿಸಿ ಎಚ್ಚರಿಕೆಯಿಂದ ವಿಕೆಟ್ ಕಾಯ್ದುಕೊಳ್ಳುವುದರ ಕಡೆಗೆ ಗಮನ ಹರಿಸಿತು. ಸೀಮ್ ಮತ್ತು ಸ್ವಿಂಗ್ ಆಗುತ್ತಿದ್ದ ಪಿಚ್ ನಲ್ಲಿ ಇಬ್ಬರೂ ಮೊದಲ ವಿಕೆಟ್ ಗೆ 64 ರನ್ ಗಳ ಜೊತೆಯಾಟ ನೀಡಿದರು. ಈ ವೇಳೆ ರೋಹಿತ್ ಶರ್ಮಾ 28 ರನ್ ಗಳಿಸಿ ನಿರ್ಗಮಿಸಿದರು.

ಆದರೆ ಇನ್ನೊಂದೆಡೆ ದೃಢವಾಗಿ ನಿಂತ ಶಿಖರ್ ಧವನ್ ಭರ್ತಿ 106 ಎಸೆತ ಎದುರಿಸಿ 98 ರನ್ ಗಳಿಸಿ ಶತಕ ವಂಚಿತರಾಗಿ ಔಟಾದರು. ನಾಯಕ ವಿರಾಟ್ ಕೊಹ್ಲಿ ಮತ್ತೆ ರನ್ ಓಟ ಮುಂದುವರಿಸಿ 56 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಶ್ರೇಯಸ್ ಐಯರ್ ಕೇವಲ 6 ರನ್, ಹಾರ್ದಿಕ್ ಪಾಂಡ್ಯ ಕೇವಲ 1 ರನ್ ಗಳಿಸಲಷ್ಟೇ ಶಕ್ತರಾದರು. ಆದರೆ ಇದುವರೆಗೆ ಕಳಪೆ ಫಾರ್ಮ್ ನಿಂದಾಗಿ ಟೀಕೆಗೊಳಗಾಗಿದ್ದ ಕೆಎಲ್ ರಾಹುಲ್ ಮತ್ತು ಚೊಚ್ಚಲ ಏಕದಿನ ಪಂದ್ಯವಾಡುತ್ತಿರುವ ಕೃನಾಲ್ ಪಾಂಡ್ಯ ಕೊನೆಯ 10 ಓವರ್ ನಲ್ಲಿ ಭರ್ಜರಿ ರನ್ ಗಳಿಸಿದರು. ರಾಹುಲ್ 43 ಎಸೆತಗಳಿಂದ 62 ರನ್ ಬಾರಿಸಿ ಅಜೇಯರಾಗುಳಿದರೆ ಕೃನಾಲ್ ಪಾಂಡ್ಯ ಕೇವಲ 31 ಎಸೆತಗಳಿಂದ 58 ರನ್ ಗಳಿಸಿ ಚೊಚ್ಚಲ ಪಂದ್ಯದಲ್ಲೇ  ವೇಗದ ಅರ್ಧಶತಕ ಮಾಡಿದ ದಾಖಲೆಯೊಂದಿಗೆ ನಾಟೌಟ್ ಆಗಿ ಉಳಿದರು.

ಈ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಇಂಗ್ಲೆಂಡ್ ಆರಂಭಿಕರು ಬಿರುಸಿನಿಂದಲೇ ರನ್ ಗಳಿಸಲು ಆರಂಭಿಸಿದ್ದರು. ಆರಂಭದ ವಿಕೆಟ್ ಗೆ ಜೇಸನ್ ರಾಯ್ (45), ಜಾನಿ ಬೇರ್ ಸ್ಟೋ (94) ಅಬ್ಬರಿಸಿದಾಗ ಭಾರತ ಪಂದ್ಯ ಸೋಲಬಹುದು ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಪಂದ್ಯಕ್ಕೆ ತಿರುವು ನೀಡಿದವರು ಶ್ರಾದ್ಧೂಲ್ ಠಾಕೂರ್ ಹಾಗೂ ಚೊಚ್ಚಲ ಪಂದ್ಯವಾಡುತ್ತಿರುವ ಪ್ರಸಿದ್ಧ ಕೃಷ್ಣ. ಇಬ್ಬರೂ ಬೆನ್ನು ಬೆನ್ನಿಗೆ ಪ್ರಮುಖ ವಿಕೆಟ್ ಗಳನ್ನು ಕೀಳುವುದರ ಮೂಲಕ ಸೋಲುತ್ತಿದ್ದ ಪಂದ್ಯಕ್ಕೆ ಟ್ವಿಸ್ಟ್ ಕೊಟ್ಟರು. ಅಂತಿಮವಾಗಿ ಇಂಗ್ಲೆಂಡ್ 42.1 ಓವರ್ ಗಳಲ್ಲಿ 251 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಪ್ರಸಿದ್ಧ ಕೃಷ್ಣ 4, ಶ್ರಾದ್ಧೂಲ್ ಠಾಕೂರ್, ಭುವನೇಶ್ವರ್ ಕುಮಾರ್ 2 ವಿಕೆಟ್ ಕಬಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ