ನೇಪಿಯರ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಟಿ20 ಪಂದ್ಯ ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಟೈ ಆಗಿದ್ದು, ಟೀಂ ಇಂಡಿಯಾ 1-0 ಅಂತರದಿಂದ ಸರಣಿ ತನ್ನದಾಗಿಸಿಕೊಂಡಿದೆ.
ಇಂದಿನ ಪಂದ್ಯಕ್ಕೆ ಪದೇ ಪದೇ ಮಳೆ ಅಡ್ಡಿಪಡಿಸಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 19.4 ಓವರ್ ಗಳಲ್ಲಿ 160 ರನ್ ಗಳಿಗೆ ಆಲೌಟ್ ಆಯಿತು. ಕಾನ್ವೇ 59, ಗ್ಲೆನ್ ಫಿಲಿಪ್ಸ್ 54 ರನ್ ಗಳಿಸಿದರು. 15 ಓವರ್ ಗಳವರೆಗೂ ನ್ಯೂಜಿಲೆಂಡ್ ಭರ್ಜರಿ ಮೊತ್ತ ಕಲೆ ಹಾಕುತ್ತದೆ ಎಂದೇ ಎಲ್ಲರ ಲೆಕ್ಕಾಚಾರವಾಗಿತ್ತು.
ಆದರೆ ಅಂತಿಮ ಓವರ್ ಗಳಲ್ಲಿ ಭಾರತೀಯ ಬೌಲರ್ ಗಳು ಸತತವಾಗಿ ವಿಕೆಟ್ ಕಬಳಿಸಿದರು. ಒಂದು ಹಂತದಲ್ಲಿ 130 ರನ್ ಗೆ 3 ವಿಕೆಟ್ ಕಳೆದುಕೊಂಡಿದ್ದ ಕಿವೀಸ್ ಕೊನೆಗೆ ಮತ್ತೆ 30 ರನ್ ಗಳಿಸುವಷ್ಟರಲ್ಲಿ ಉಳಿದ 7 ವಿಕೆಟ್ ಕಳೆದುಕೊಂಡಿತು. ಮೊಹಮ್ಮದ್ ಸಿರಾಜ್ ಮತ್ತು ಅರ್ಷ್ ದೀಪ್ ಸಿಂಗ್ ಮಾರಕ ದಾಳಿ ಸಂಘಟಿಸಿ ತಲಾ 4 ವಿಕೆಟ್ ತಮ್ಮದಾಗಿಸಿಕೊಂಡರು. ಸಿರಾಜ್ ಒಂದು ನೇರ ಎಸೆತದ ಮೂಲಕ ರನೌಟ್ ಕೂಡಾ ಮಾಡಿದರು. ಉಳಿದೊಂದು ವಿಕೆಟ್ ಹರ್ಷಲ್ ಪಟೇಲ್ ಪಾಲಾಯಿತು.
ಈ ಮೊತ್ತ ಬೆನ್ನತ್ತಿದ ಭಾರತ ಮಳೆಯ ಸೂಚನೆಯಿದ್ದಿದ್ದರಿಂದ ಬಿರುಸಿನ ಆರಂಭಕ್ಕೆ ಕೈ ಹಾಕಿತು. ಆದರೆ ರಿಷಬ್ ಪಂತ್ 11, ಇಶಾನ್ 10, ಸೂರ್ಯಕುಮಾರ್ 13, ಶ್ರೇಯಸ್ ಅಯ್ಯರ್ ಖಾತೆ ತೆರೆಯದೇ ಔಟಾದರು. ಆದರೆ ಇನ್ನೊಂದೆಡೆ ನಾಯಕನ ಆಟವಾಡಿದ ಹಾರ್ದಿಕ್ ಪಾಂಡ್ಯ 18 ಎಸೆತಗಳಿಂದ ಅಜೇಯ 30 ರನ್ ಗಳಿಸಿ ಮಿಂಚಿದರು. 9 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 75 ರನ್ ಗಳಿಸಿದ್ದಾಗ ಮತ್ತೆ ಮಳೆ ಆರಂಭವಾಯಿತು.
ಕೊನೆಗೆ ಮಳೆ ಬಿಡದೇ ಇದ್ದಾಗ ಡಕ್ ವರ್ತ್ ಲೂಯಿಸ್ ಪ್ರಕಾರ ಪಂದ್ಯ ನಿರ್ಣಯಿಸಲಾಯಿತು. ಅದರಂತೆ 9 ಓವರ್ ಗಳಲ್ಲಿ 75 ರನ್ ಟಾರ್ಗೆಟ್ ಫಿಕ್ಸ್ ಆಗಿತ್ತು. ಅದನ್ನು ಭಾರತ ಸಾಧಿಸಿದ್ದರಿಂದ ಪಂದ್ಯ ಟೈ ಆಯಿತು. ಇದು ನ್ಯೂಜಿಲೆಂಡ್ ಗೆ ನಿರಾಸೆ ತಂದರೆ ಭಾರತಕ್ಕೆ ವರವಾಗಿ ಪರಿಣಮಿಸಿತು. ಎರಡನೇ ಪಂದ್ಯವನ್ನು ಟೀಂ ಇಂಡಿಯಾ ಗೆದ್ದಿದ್ದರಿಂದ ಸರಣಿ ಪ್ರವಾಸೀ ತಂಡದ ಪಾಲಾಯಿತು.