ಗೆಲುವಿನ ಜೊತೆ ಹಾರ್ದಿಕ್, ಶುಬ್ಮನ್ ಗಿಲ್ ಗೆ ಫಾರ್ಮ್ ಗೆ ಬಂದ ಖುಷಿ

ಬುಧವಾರ, 2 ಆಗಸ್ಟ್ 2023 (08:10 IST)
ಪೋರ್ಟ್ ಆಫ್ ಸ್ಪೇನ್: ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಮೂರನೇ ಏಕದಿನ ಪಂದ್ಯವನ್ನು 200 ರನ್ ಗಳಿಂದ ಗೆದ್ದ ಟೀಂ ಇಂಡಿಯಾ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 351 ರನ್ ಗಳಿಸಿತು. ಮುಖ್ಯವಾಗಿ ಫಾರ್ಮ್ ಕಳೆದುಕೊಂಡಿದ್ದ ಆಟಗಾರರು ಈ ಪಂದ್ಯದಲ್ಲಿ ಫಾರ್ಮ್ ಕಂಡುಕೊಂಡಿರುವುದು ಟೀಂ ಇಂಡಿಯಾಕ್ಕೆ ಸಮಾಧಾನಕರ ವಿಷಯವಾಗಿದೆ. ಆರಂಭಿಕ ಇಶಾನ್ ಕಿಶನ್ 70 ರನ್, ಶುಬ್ಮನ್ ಗಿಲ್ 85 ರನ್, ಸಂಜು ಸ್ಯಾಮ್ಸನ್ 51, ಹಾರ್ದಿಕ್ ಪಾಂಡ್ಯ ಅಜೇಯ 70, ಸೂರ್ಯಕುಮಾರ್ ಯಾದವ್ 30 ರನ್ ಗಳಿಸಿದರು. ಇದ್ದವರಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾಗಿದ್ದು ಋತುರಾಜ್ ಗಾಯಕ್ ವಾಡ್. ಅವರು ಕೇವಲ 8 ರನ್ ಗೆ ವಿಕೆಟ್ ಒಪ್ಪಿಸಿದರು. ಇಶಾನ್, ಸಂಜು ಸ್ಯಾಮ್ಸನ್ ರನ್ ಗತಿ ಹೆಚ್ಚಿಸಿದರು. ಕೊನೆಯಲ್ಲಿ ಜವಾಬ್ಧಾರಿಯುತ ಆಟವಾಡಿದ ಹಾರ್ದಿಕ್ ಪಾಂಡ್ಯ ಕೊನೆಯ ಓವರ್ ಗಳಲ್ಲಿ ಸಿಡಿದು ತಂಡದ ಮೊತ್ತ 350 ರ ಗಡಿ ತಲುಪಲು ನೆರವಾದರು.

ಈ ಮೊತ್ತ ಬೆನ್ನತ್ತಿದ ವಿಂಡೀಸ್ 35.3 ಓವರ್ ಗಳಲ್ಲಿ 151 ರನ್ ಗಳಿಗೆ ಆಲೌಟ್ ಆಯಿತು. ಅಲಿಕ್ ಅಥಂಝೆ 32, ಅಲ್ಝರಿ ಜೊಸೆಫ್ 26, ಮೋಟಿ ಅಜೇಯ 39 ರನ್ ಗಳಿಸಿದರು. ಇದರೊಂದಿಗೆ ಟೀಂ ಇಂಡಿಯಾ 200 ರನ್ ಗಳ ಭರ್ಜರಿ ಅಂತರದ ಗೆಲುವು ಸಾಧಿಸಿತು. ಇಶಾನ್‍ ಕಿಶನ್ ಸರಣಿ ಶ್ರೇಷ್ಠ, ಶುಬ್ಮನ್ ಗಿಲ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಗಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ