ಮೆಲ್ಬೊರ್ನ್: ಆಸ್ಟ್ರೇಲಿಯಾ ವಿರುದ್ಧ ಕೊನೆಯ ಎರಡು ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾಗೆ ಆಯ್ಕೆಯಾಗಿರುವ ಯುವ ಸ್ಪಿನ್ ಆಲ್ ರೌಂಡರ್ ತನುಷ್ ಕೋಟ್ಯಾನ್ ಗೆ ಕರ್ನಾಟಕದ ಕರಾವಳಿ ನಗರ ಮಂಗಳೂರಿನ ನಂಟಿದೆ. ಹೇಗೆ ಇಲ್ಲಿದೆ ಡೀಟೈಲ್ಸ್.
ತನುಷ್ ಕೋಟ್ಯಾನ್ ಹುಟ್ಟಿದ್ದು ಬೆಳೆದಿದ್ದು ಎಲ್ಲವೂ ಮುಂಬೈನಲ್ಲಿಯೇ ಇರಬಹುದು. ಆದರೆ ಅವರು ಮೂಲತಃ ಕರ್ನಾಟಕದವರು. ಅದರಲ್ಲೂ ಅವರ ಪೂರ್ವಜರು ಕರಾವಳಿ ನಗರಿ ಮಂಗಳೂರಿನವರು. ಉಡುಪಿಯ ಪಾಂಗಾಳ ಅವರ ಮೂಲ ಊರು.
ಹೀಗಾಗಿ ಇದೀಗ ಕರಾವಳಿ ಜನ ತಮ್ಮ ಊರಿನ ಹುಡುಗ ಟೀಂ ಇಂಡಿಯಾಕ್ಕೆ ಆಯ್ಕೆಯಾಗಿರುವುದಕ್ಕೆ ಖುಷಿಪಡುತ್ತಿದ್ದಾರೆ. ತನುಷ್ ಕೋಟ್ಯಾನ್ ದೇಶೀಯ ಕ್ರಿಕೆಟ್ ಆಡುವುದು ಮುಂಬೈ ಪರ. ಐಪಿಎಲ್ ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ.
ಹಾಗಿದ್ದರೂ ಅವರ ಮೂಲ ಬೇರು ಇರುವುದು ಕರ್ನಾಟಕದಲ್ಲಿ ಎನ್ನುವುದು ಹೆಮ್ಮೆಯ ಸಂಗತಿ. ಈಗಾಗಲೇ ಟೀಂ ಇಂಡಿಯಾದಲ್ಲಿರುವ ಕೆಎಲ್ ರಾಹುಲ್ ಕೂಡಾ ಮೂಲತಃ ಮಂಗಳೂರಿನವರು. ಟೀಂ ಇಂಡಿಯಾ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಮಂಗಳೂರಿನ ಅಳಿಯ. ಹೀಗಾಗಿ ಟೀಂ ಇಂಡಿಯಾಗೂ ಮಂಗಳೂರಿಗೂ ಈಗ ಭಾರೀ ಕನೆಕ್ಷನ್ ಇದೆ ಎನ್ನಬಹುದು.