ಮೊಹಮ್ಮದ್ ಶಮಿ ಕಮ್ ಬ್ಯಾಕ್ ಯಾವಾಗ, ಸುಳಿವು ಕೊಟ್ಟ ಬಿಸಿಸಿಐ

Krishnaveni K

ಮಂಗಳವಾರ, 24 ಡಿಸೆಂಬರ್ 2024 (09:18 IST)
ಮುಂಬೈ: ಟೀಂ ಇಂಡಿಯಾ ಸ್ಟಾರ್ ವೇಗಿ ಮೊಹಮ್ಮದ್ ಶಮಿ ತಂಡಕ್ಕೆ ಕಮ್ ಬ್ಯಾಕ್ ಮಾಡುವುದನ್ನು ಅಭಿಮಾನಿಗಳು ಎದಿರು ನೋಡುತ್ತಲೇ ಇದ್ದಾರೆ. ಶಮಿ ಯಾವಾಗ ಕಮ್ ಬ್ಯಾಕ್ ಮಾಡಬಹುದು ಎಂಬ ಬಗ್ಗೆ ಈಗ ಬಿಸಿಸಿಐ ಸುಳಿವು ಕೊಟ್ಟಿದೆ.

ಕಳೆದ ವರ್ಷ ಏಕದಿನ ವಿಶ್ವಕಪ್ ನಲ್ಲಿ ಆಡಿದ್ದೇ ಕೊನೆ. ಅದಾದ ಬಳಿಕ ಮೊಹಮ್ಮದ್ ಶಮಿ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿಲ್ಲ. ಮೊಣಕಾಲಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಅವರು ಸುದೀರ್ಘ ಸಮಯದಿಂದ ವಿಶ್ರಾಂತಿಯಲ್ಲಿದ್ದಾರೆ.

ಇತ್ತೀಚೆಗೆ ದೇಶೀಯ ಕ್ರಿಕೆಟ್ ನಲ್ಲಿ ತವರು ಬಂಗಾಲ ಪರ ಆಡಿದ್ದರು. ಆದರೆ ಬಹಳ ದಿನಗಳ ನಂತರ ಕ್ರಿಕೆಟ್ ಆಡಿದ್ದರಿಂದ ಮತ್ತೆ ಅವರ ಮೊಣಕಾಲಿನ ಸ್ವಲ್ಪ ಮಟ್ಟಿಗೆ ಊತ ಕಾಣಿಸಿಕೊಂಡಿತ್ತು. ಹೀಗಾಗಿ ಶಮಿ ಬಾರ್ಡರ್ ಗವಾಸ್ಕರ್ ಟ್ರೋಫಿಯಿಂದ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಘೋಷಿಸಿದೆ.

ಇದರ ಬೆನ್ನಲ್ಲೇ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂಬ ಸಿಹಿ ಸುದ್ದಿಯನ್ನೂ ನೀಡಿದೆ. ಮೊಹಮ್ಮದ್ ಶಮಿ ಮುಂಬರುವ ಚಾಂಪಿಯನ್ಸ್ ಟ್ರೋಫಿ ವೇಳೆಗೆ ತಂಡಕ್ಕೆ ಕಮ್ ಬ್ಯಾಕ್ ಮಾಡುವ ನಿರೀಕ್ಷೆಯಿದೆ. ಏಕದಿನ ಫಾರ್ಮ್ಯಾಟ್ ನಲ್ಲಿ ಜಸ್ಪ್ರೀತ್ ಬುಮ್ರಾಗೆ ಸಾಥ್ ಕೊಡಲು ಒಬ್ಬ ಸಮರ್ಥ ವೇಗಿಯ ಅಗತ್ಯವಿದೆ. ಹೀಗಾಗಿ ಚಾಂಪಿಯನ್ಸ್ ಟ್ರೋಫಿಯಂತಹ ಮಹತ್ವದ ಟೂರ್ನಿಗೆ ಶಮಿ ಮರಳುವ ಸಂಭವವಿದೆ.

ಆದರೆ ಅದಕ್ಕೆ ಮೊದಲು ವಿಜಯ್ ಹಜಾರೆ ಟ್ರೋಫಿಯಲ್ಲಿ ಅವರು ಆಡಲಿದ್ದಾರೆ ಎಂದು ಬಿಸಿಸಿಐ ಹೇಳಿದೆ. ಈ ಟೂರ್ನಿಯಲ್ಲಿ ಶಮಿ ಹೇಗೆ ಆಡುತ್ತಾರೆ ಮತ್ತು ಅವರ ಗಾಯ ಯಾವುದೇ ಸಮಸ್ಯೆಯಾಗದೇ ಇದ್ದರೆ ಮುಂಬರುವ ಟೂರ್ನಿಗಳಿಗೆ ಅವರು ಟೀಂ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ