ರಾಹುಲ್ ದ್ರಾವಿಡ್ ಗೆ ಅಂದು ತಟ್ಟಿದ್ದ ಬಿಸಿ ಇಂದು ಆಸ್ಟ್ರೇಲಿಯಾ ನಾಯಕ ಟಿಮ್ ಪೇಯ್ನ್ ಗೂ ಆಯ್ತು!

ಭಾನುವಾರ, 1 ಡಿಸೆಂಬರ್ 2019 (08:49 IST)
ಅಡಿಲೇಡ್: ಪಾಕಿಸ್ತಾನದ ವಿರುದ್ಧ ಪಿಂಕ್ ಬಾಲ್ ಟೆಸ್ಟ್ ಆಡುತ್ತಿರುವ ಆಸ್ಟ್ರೇಲಿಯಾ ಎರಡನೇ ದಿನದಾಟದಲ್ಲಿ ಹಲವು ದಾಖಲೆಗಳನ್ನೇ ಮಾಡಿತ್ತು. ಇದರಲ್ಲಿ ಡೇವಿಡ್ ವಾರ್ನರ್ ತ್ರಿಶತಕ, ಸ್ಟೀವ್ ಸ್ಮಿತ್ ವೇಗದ 7000 ಟೆಸ್ಟ್ ರನ್ ಸೇರಿದೆ.


ಇವರಿಬ್ಬರ ಅಬ್ಬರದ ಬ್ಯಾಟಿಂಗ್ ನಿಂದಾಗಿ ಆಸೀಸ್ 3 ವಿಕೆಟ್ ನಷ್ಟಕ್ಕೆ 589 ರನ್ ಗಳಿಸಿ ಮೊದಲ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಆದರೆ ಡಿಕ್ಲೇರ್ ಮಾಡುವಾಗ ವಾರ್ನರ್  ಅಜೇಯ 335 ರನ್ ಗಳಿಸಿ ಕ್ರೀಸ್ ನಲ್ಲಿದ್ದರು. ಅವರ ಫಾರ್ಮ್ ನೋಡಿದರೆ ಅವರಿಗೆ ತ್ವರಿತವಾಗಿ 400 ರ ಗಡಿ ದಾಟುವ ಅವಕಾಶವಿತ್ತು. ಒಂದು ವೇಳೆ 400 ರನ್ ಗಳಿಸಿದ್ದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಬ್ರಿಯಾನ್ ಲಾರಾ ಬಳಿಕ 400 ರನ್ ಗಳಿಸಿದ ದ್ವಿತೀಯ ಆಟಗಾರನೆನಿಸಿಕೊಳ್ಳುತ್ತಿದ್ದರು. ಆದರೆ ನಾಯಕ ಟಿಮ್ ಪೇಯ್ನ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡರು.

ಇದರಿಂದಾಗಿ ಪೇಯ್ನ್ ಇದೀಗ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಂದು ಪಾಕಿಸ್ತಾನದ ವಿರುದ್ಧದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ವೀರೇಂದ್ರ ಸೆಹ್ವಾಗ್ ತ್ರಿಶತಕ ಗಳಿಸಿದ್ದರೆ, ಸಚಿನ್ 196 ರನ್ ಗಳಿಸಿದ್ದಾಗ ಭಾರತ ತಂಡದ ನಾಯಕರಾಗಿದ್ದ ರಾಹುಲ್ ದ್ರಾವಿಡ್ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದ್ದರು. ಈ ವಿಚಾರ ವ್ಯಾಪಕ ಚರ್ಚೆಗೆ ಗುರಿಯಾಗಿತ್ತು.

ಇದೀಗ ಪೇಯ್ನ್ ನಿರ್ಧಾರವೂ ಅದೇ ರೀತಿ ಚರ್ಚೆಗೊಳಗಾಗಿದೆ. ಟ್ವಿಟರ್ ನಲ್ಲಿ ಪೇಯ್ನ್ ವಿರುದ್ಧ ಟೀಕಾಪ್ರಹಾರ ನಡೆಸಿರುವ ಅಭಿಮಾನಿಗಳು ಅವಕಾಶವಿದ್ದರೂ ವಾರ್ನರ್ 400 ರನ್ ಗಳಿಸಲು ಅವಕಾಶ ನೀಡದೇ ಟೆಸ್ಟ್ ಕ್ರಿಕೆಟ್ ನ ಮಜಾ ಹಾಳು ಮಾಡಿದರು ಎಂದು ಕೆಂಡಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ