ಮುಂಬೈ: ಆಸ್ಟ್ರೇಲಿಯಾ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯವನ್ನೂ ಸೋತ ಬಳಿಕ ಟೀಂ ಇಂಡಿಯಾದಲ್ಲಿ ಬದಲಾವಣೆಯ ಕೂಗು ಕೇಳಿಬಂದಿದೆ. ಟೀಂ ಇಂಡಿಯಾಗೆ ಹೊಸ ನಾಯಕ ಯಾರಾಗಬೇಕು, ತಂಡದಲ್ಲಿ ಯಾರೆಲ್ಲಾ ಇರಬೇಕು ಎಂಬ ಬಗ್ಗೆ ಇಲ್ಲಿದೆ ಒಂದು ವಿಶ್ಲೇಷಣೆ.
ಕ್ಯಾಪ್ಟನ್ ಬದಲಾವಣೆಯಾಗಬೇಕು
ಟೀಂ ಇಂಡಿಯಾ ನಾಯಕರಾಗಿರುವ ರೋಹಿತ್ ಶರ್ಮಾ ಸ್ವತಃ ತಾವೇ ಕಳಪೆ ಫಾರ್ಮ್ ನಲ್ಲಿದ್ದಾರೆ. ಜೊತೆಗೆ ಕಳೆದ ಎರಡು ಸರಣಿಗಳಲ್ಲಿ ಅವರ ನಾಯಕತ್ವ ನೋಡಿದರೆ ತಾನೇನು ಮಾಡುತ್ತಿದ್ದೇನೆಂಬ ಅರಿವೇ ಅವರಿಗಿಲ್ಲದಂತಾಗಿದೆ. ಅವರ ನಾಯಕತ್ವದಲ್ಲಿ ಮೊದಲಿನ ಉತ್ಸಾಹ ಕಂಡುಬರುತ್ತಿಲ್ಲ. ಆಕ್ರಮಣಕಾರೀ ಕ್ಯಾಪ್ಟನ್ಸಿ ಬದಲು ರಕ್ಷಣಾತ್ಮಕ ತಂತ್ರಕ್ಕೆ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ರೋಹಿತ್ ನಿವೃತ್ತಿಯಾಗಿ ಆ ಸ್ಥಾನಕ್ಕೆ ಜಸ್ಪ್ರೀತ್ ಬುಮ್ರಾರನ್ನೇ ನಾಯಕರಾಗಿಸುವುದು ಸೂಕ್ತ. ಓರ್ವ ಬೌಲರ್ ಕ್ಯಾಪ್ಟನ್ ಆಗುವುದರಿಂದ ಆತ ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥೈಸಿಕೊಳ್ಳಬಲ್ಲ. ಈ ಹಿಂದೆ ಅನಿಲ್ ಕುಂಬ್ಳೆ ಟೆಸ್ಟ್ ಕ್ಯಾಪ್ಟನ್ ಆಗಿ ಯಶಸ್ವಿಯಾಗಿದ್ದೂ ಇದಕ್ಕೆ ಮತ್ತೊಂದು ಉದಾಹರಣೆ.
ವಿರಾಟ್ ಕೊಹ್ಲಿಗೆ ಕೊಕ್
ವಿಶ್ವ ಕ್ರಿಕೆಟ್ ನಲ್ಲಿ ಅನೇಕ ದಾಖಲೆಗಳನ್ನು ತಮ್ಮದಾಗಿಸಿಕೊಂಡು, ಕಿಂಗ್ ಆಗಿ ಮೆರೆದಿದ್ದ ವಿರಾಟ್ ಕೊಹ್ಲಿ ಬ್ಯಾಟಿಂಗ್ ನಲ್ಲಿ ಈಗ ಮೊದಲಿನ ಝಲಕ್ ಕಾಣುತ್ತಿಲ್ಲ. ಪದೇ ಪದೇ ಒಂದೇ ತಪ್ಪು ಮಾಡುತ್ತಿರುವುದು ನೋಡಿದರೆ ಇವರು ಕೊಹ್ಲಿಯೇ ಎಂದು ಅನುಮಾನಿಸುವಷ್ಟು ಕಳೆಗುಂದಿದ್ದಾರೆ. ಅವರಿಲ್ಲದೆಯೂ ತಂಡಕ್ಕೆ ಗೆಲ್ಲಲು ಸಾಧ್ಯ ಎಂದು ಸಾಬೀತಾಗಿದೆ. ಹೀಗಾಗಿ ಅವರು ಇನ್ನು ನಿವೃತ್ತಿಯಾಗಿ ಯುವಕರಿಗೆ ದಾರಿ ಮಾಡಿಕೊಡುವುದು ಸೂಕ್ತ. ಕೊಹ್ಲಿ ಸ್ಥಾನ ತುಂಬಲು ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್ ಕಾಯುತ್ತಿದ್ದಾರೆ.
ಕೆಎಲ್ ರಾಹುಲ್ ಖಾಯಂ ಓಪನರ್
ಕೆಎಲ್ ರಾಹುಲ್ ಟೀಂ ಇಂಡಿಯಾದಲ್ಲಿ ವೃತ್ತಿ ಜೀವನ ಆರಂಭಸಿದ್ದೇ ಓಪನರ್ ಆಗಿ. ಅವರಿಗೆ ಇದುರೆಗೆ ಯಶಸ್ಸು ಸಿಕ್ಕಿರುವುದೂ ಓಪನರ್ ಆಗಿ. ಹೀಗಾಗಿ ಅವರು ಟೆಸ್ಟ್ ಪಂದ್ಯಗಳಲ್ಲಿ ಓಪನರ್ ಆಗಿಯೇ ಖಾಯಂ ಆಟಗಾರನಾಗುವುದು ಸೂಕ್ತ.
ಮಧ್ಯಮ ಕ್ರಮಾಂಕಕ್ಕೆ ಹೊಸಬರು ಬರಲಿ
ನಿತೀಶ್ ಕುಮಾರ್ ರೆಡ್ಡಿ ಕೆಳ ಕ್ರಮಾಂಕದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿದ್ದಾರೆ. ಹೀಗಾಗಿ ಮಧ್ಯಮ ಕ್ರಮಾಂಕಕ್ಕೆ ಸರ್ಫರಾಜ್ ಖಾನ್, ಶ್ರೇಯಸ್ ಅಯ್ಯರ್ ನಂತಹ ಆಟಗಾರರಿಗೆ ಅವಕಾಶ ಸಿಗುವಂತಾಗಲಿ. ರಿಷಭ್ ಪಂತ್ ಟೆಸ್ಟ್ ಶೈಲಿಯಲ್ಲಿ ಎಷ್ಟೋ ಬಾರಿ ಆಪತ್ ಬಾಂಧವರಾಗಿದ್ದಾರೆ. ಆದರೆ ಅವರಿಗೆ ಪೈಪೋಟಿ ನೀಡಲು ಧ್ರುವ್ ಜ್ಯುರೆಲ್, ಸಂಜು ಸ್ಯಾಮ್ಸನ್ ಅಥವಾ ಇಶಾನ್ ಕಿಶನ್ ರನ್ನು ಕರೆತಂದರೆ ರಿಷಭ್ ಕೂಡಾ ಜವಾಬ್ಧಾರಿಯುತ ಇನಿಂಗ್ಸ್ ಆಡಲು ಕಲಿಯಬಹುದು.
ಜಸ್ಪ್ರೀತ್ ಬುಮ್ರಾಗೆ ಬೇಕು ಅನುಭವಿಯ ಸಾಥ್
ಆಸ್ಟ್ರೇಲಿಯಾ ಸರಣಿಯಲ್ಲಿ ಏಕಾಂಗಿಯಾಗಿ ಟೀಂ ಇಂಡಿಯಾ ಬೌಲಿಂಗ್ ಜವಾಬ್ಧಾರಿಯನ್ನು ಹೊತ್ತು ಬುಮ್ರಾ ಬಳಲಿದ್ದನ್ನು ನಾವು ಕಂಡಿದ್ದೇವೆ. ಅವರ ಜವಾಬ್ಧಾರಿಯ ಹೊರೆ ಕಡಿಮೆ ಮಾಡಲು ಮೊಹಮ್ಮದ್ ಶಮಿಯಂತಹ ಅನುಭವಿ ಬೌಲರ್ ಮತ್ತೆ ತಂಡಕ್ಕೆ ಬರುವುದು ಅಗತ್ಯವಾಗಿದೆ. ರವೀಂದ್ರ ಜಡೇಜಾ ಕೂಡಾ ಏಕಾಂಗಿಯಾಗಿದ್ದು ಅಕ್ಸರ್ ಪಟೇಲ್, ಕುಲದೀಪ್ ಯಾದವ್ ಗೆ ಮತ್ತಷ್ಟು ಅವಕಾಶ ಸಿಗುವಂತಾಗಬೇಕು.
ಈ ಬಾರಿ ಡಬ್ಲ್ಯುಟಿಸಿ ಫೈನಲ್ ಅವಕಾಶವಂತೂ ಬಹುತೇಕ ಮಿಸ್ ಆಗಿದೆ. ಆದರೆ ಹಿರಿಯರು ಈಗ ಕಿರಿಯರಿಗೆ ತಂಡವನ್ನು ಒಪ್ಪಿಸುವ ಪರಿವರ್ತನೆಯ ಕಾಲ ಬಂದಿದೆ. ಭಾರತ ತಂಡ ಮತ್ತೆ ಗೆಲುವಿನ ಹಳಿಗೆ ಬರಬೇಕಾದರೆ ಮೇಜರ್ ಸರ್ಜರಿ ಅನಿವಾರ್ಯವಾಗಿದೆ.